ಶನಿವಾರ, ಡಿಸೆಂಬರ್ 9, 2017



“ವೈದ್ಯರ ಮೇಲೆ” “ಹಲ್ಲೆಗಳು” “ಏಕೆ” ಆಗುತ್ತಿವೆ?
ಒಗಟಿನಂತೆ ಕಾಣುವ ಈ ಶೀರ್ಷಿಕೆಯಲ್ಲಿ ಮೂರು ಭಾಗಗಳಿವೆ. ಅದನ್ನು ವಿವರಿಸಲೆಂದೇ ಈ ಪ್ರಯತ್ನ.

ನಾಡಿನಾದ್ಯಂತ ವೈದ್ಯರ ಮೇಲೆ ಹಲ್ಲೆಗಳು ಜರುಗುತ್ತಿವೆ. ಒಂದು ನಾಗರೀಕ ಸಮಾಜದಲ್ಲಿ ಇದಕ್ಕಿಂತ ಖಂಡನೀಯ ಕೃತ್ಯ ಮತ್ತೊಂದು ಇರಲಾರದು. ರಾಜಕಾರಣಿಗಳು, ಹಲ್ಲೆಕೋರರು ಎಷ್ಟೇ ಸಮರ್ಥಿಸಿಕೊಂಡರೂ ಈ ರೀತಿಯ ಕೃತ್ಯಗಳು ಸರ್ವಥಾ ಸಾಧುವಲ್ಲ. ಇಂತಹ ಹೇಯಗಳನ್ನು ಕೇವಲ ಖಂಡಿಸಿ ಪ್ರಯೋಜನವಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುವುದರಿಂದ ಪರಿಸ್ಥಿತಿ ಉತ್ತಮಗೊಳಿಸಲು ಸಾಧ್ಯ. ಅದಕ್ಕೇ ಮೂಲ ಪ್ರಶ್ನೆಯನ್ನು ಮೂರು ಭಾಗಗಳಾಗಿ ಶೀರ್ಷಿಕೆಯಲ್ಲಿ ವಿಂಗಡಿಸಿದೆ.

“ಹಲ್ಲೆಗಳು” ಈಗ ಮಾತ್ರ ಆಗುತ್ತಿವೆಯೇ? ಇಲ್ಲ! ಈ ಮೊದಲೂ ವೈದ್ಯರ ಮೇಲೆ ಹಲ್ಲೆಗಳು ಜರುಗಿದ್ದುಂಟು. ಆದರೆ ಆಗ ಅವು ತೀರಾ ಅಪರೂಪದ ಸಂಗತಿಗಳಾಗಿದ್ದವು. ವೈಯುಕ್ತಿಕ ಕಾರಣಗಳಿಂದಲೂ ಹೀಗೆ ಆಗುತ್ತಿದ್ದವು. ಆದರೆ ಈಗ ಹಾಗಲ್ಲ. ಪ್ರಸ್ತುತ ಆಸ್ಪತ್ರೆಯಲ್ಲಿ ದಾಖಲಾದ ರೋಗಿ ಮರಣ ಹೊಂದಿದರೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತದೆ! ಸರಿ-ತಪ್ಪುಗಳ ಜಿಜ್ಞಾಸೆಯೇ ಇಲ್ಲ; ಹೊಡಿ-ಬಡಿ ಸಂಪ್ರದಾಯ! ಇದಕ್ಕೆ ರಾಜಕಾರಣದ ಕುಮ್ಮಕ್ಕು ಬೇರೆ!

“ಹಲ್ಲೆಗಳಿಗೆ” ಕಾರಣ ಇದ್ದರೂ ವೈದ್ಯರ ಮೇಲೆ ಏಕೆ?

ಏಕೆ ಎಂಬುದು ಕಷ್ಟದ ಪ್ರಶ್ನೆ. ಇದಕ್ಕೆ ಸ್ವಲ್ಪ ಹಿನ್ನೆಲೆ ಅಗತ್ಯ.

ದಶಕಗಳ ಹಿಂದೆ ಯಾರಾದರೂ ಆಸ್ಪತ್ರೆಗಳಲ್ಲಿ ಓಡಾಡುತ್ತಿದ್ದರೆ ಅವರಿಗೆ ಆಸ್ಪತ್ರೆಯ ಮುಖ್ಯ ಸ್ಥಾನಗಳಲ್ಲಿ ವೈದ್ಯರೇ ಕಾಣುತ್ತಿದ್ದರು. ಆಸ್ಪತ್ರೆಯ ನಿರ್ದೇಶಕ, ಸಂಚಾಲಕ, ಅಧೀಕ್ಷಕ, ಇತ್ಯಾದಿ ಸ್ಥಾನಗಳಲ್ಲಿ ಇದ್ದವರು ವೈದ್ಯರೇ. ವೈದ್ಯಕೀಯ ವೆಚ್ಚ ಬಹಳ ಕಡಿಮೆ ಇತ್ತು. ರೋಗಿಯ ಚಿಕಿತ್ಸೆಗೆ ಎಂದು ಕಟ್ಟಿದ ಆ ಅಲ್ಪ ಮೊತ್ತದ ಬಹುಪಾಲು ವೈದ್ಯರಿಗೆ ಸೇರುತ್ತಿತ್ತು. ಆಗ ವೈದ್ಯರ ಸ್ಥಾನಮಾನ ಘನವಾಗಿತ್ತು. ಯಾವುದಾದರೂ ರೋಗಿಗೆ ವೈದ್ಯರು ಉಚಿತ ಚಿಕಿತ್ಸೆಯೂ, ರಿಯಾಯಿತಿಯೋ ನೀಡಬೇಕು ಎಂದಿದ್ದರೆ ಒಂದು ಷರಾ ಬರೆದು ಸಹಿ ಹಾಕಿದ್ದರೆ ಸಾಕಾಗುತ್ತಿತ್ತು. ರೋಗಿಗಳ ಪಾಲಿಗೆ ವೈದ್ಯರು ಸರ್ವಶಕ್ತರಾಗಿದ್ದರು. ಆ ಸ್ಥಾಯೀ ಭಾವ ಎಲ್ಲರ ಮನಸ್ಸಿನಲ್ಲಿ ಬೇರೂರಿತ್ತು.

ಈಗಿನ ದಿನಗಳಲ್ಲಿ ಇರುವುದು ಆಸ್ಪತ್ರೆಯಲ್ಲ; ಅದು ಆರೋಗ್ಯ ಸಂಕೀರ್ಣ! ಸ್ವಾಸ್ಥ್ಯ ಸಮುಚ್ಚಯ! ಬಹುಮಹಡಿ ಕಟ್ಟಡಗಳು; ಆಕರ್ಷಕ ಒಳಾಂಗಣ; ದುಬಾರಿ ಕಲಾಕೃತಿಗಳು; ಪ್ರಭಾವೀ ಜಾಹೀರಾತುಗಳು; ಪರೀಕ್ಷೆಗಳ ಮೇಲೆ ರಿಯಾಯತಿ ಕೂಪನ್ ಗಳು; ಬೃಹತ್ ಗಾತ್ರದ ಉಪಕರಣಗಳು; ಐಶಾರಾಮಿ ವಾರ್ಡುಗಳು – ಹೀಗೆ ಹತ್ತು ಹಲವಾರು. 

ಇಂತಹ ದೊಡ್ಡ ದೊಡ್ಡ ಆರೋಗ್ಯ ಸಂಕೀರ್ಣಗಳನ್ನು ನಿಭಾಯಿಸುವುದು ಬಡಪಾಯಿ ವೈದ್ಯರಿಗೆ ಸಾಧ್ಯವಿಲ್ಲ ಎಂದು ಈ ಜಾಗಗಳಿಗೆ ಹಣ ಹಾಕಿರುವ ಉದ್ಯಮಪತಿಗಳ ನಿಲುವು. ಆದ್ದರಿಂದ ಇಂತಹ ಬೃಹತ್ ಸಮುಚ್ಚಯಗಳನ್ನು ನಡೆಸುವವರು MBA ಡಿಗ್ರಿ ಹೊಂದಿರುವ ವ್ಯವಹಾರ ಆಡಳಿತಗಾರರು. ಆಸ್ಪತ್ರೆ ಎನ್ನುವುದು ಹೇಗೆ ಕೆಲಸ ಮಾಡುತ್ತದೆ ಎಂಬುದಿರಲಿ, ಈ ಆಡಳಿತಗಾರರಿಗೆ ಆಸ್ಪತ್ರೆ ಹೇಗೆ ಇರುತ್ತದೆ ಎಂಬುದೂ ತಿಳಿದಿರಬೇಕಿಲ್ಲ! ಇಂತಹವರು ತಮ್ಮ ಕೋಣೆಯ ಸುಪ್ಪತಿಗೆಯ ಮೇಲೆ ಕೂತು ತಮ್ಮ ವೈಯುಕ್ತಿಕ ಗಣಕ ಯಂತ್ರದಲ್ಲಿ ಆಸ್ಪತ್ರೆಯ ಖರ್ಚು-ವೆಚ್ಚದ ದಾಖಲೆ ನೋಡುತ್ತಾ, ಬೇರೆ ಉದ್ಯಮಗಳಲ್ಲಿ ಬಳಸುವ ಪರಿಮಾಣಗಳನ್ನು ಆಸ್ಪತ್ರೆಯ ನಿರ್ವಹಣೆಯಲ್ಲೂ ಬಳಸುತ್ತಾ, ಯಾವ ವೈದ್ಯ ಆಸ್ಪತ್ರೆಗೆ ಎಷ್ಟು ಲಾಭ ತಂದಿದ್ದಾನೆ ಎಂದು ಗಮನಿಸುತ್ತಾ, ಯಾವ ಖರ್ಚಿಗೆ ಕಡಿವಾಣ ಹಾಕಿದರೆ ಲಾಭ ಎಷ್ಟು ಎಂದು ಚರ್ಚಿಸುತ್ತಾ ಸಾಗಬಹುದು. ಆಸ್ಪತ್ರೆ ಎಂಬುದು ಕೇವಲ ಹಣ ಬೆಳೆಯುವ ಗಿಡವಲ್ಲ; ಅದು ಚಿಕಿತ್ಸೆ ನೀಡುವ, ಜೀವ ಉಳಿಸುವ, ನೊಂದವರನ್ನು ಸಾಂತ್ವನಗೊಳಿಸುವ ಸ್ಥಳ ಎಂಬ ಮಾತು ಇಂತಹ ವೈದ್ಯರಲ್ಲದ ಆಡಳಿತಗಾರರಿಗೆ ಅಪಥ್ಯ. ಇವರಿಗೆ ಉತ್ತಮ ಚಿಕಿತ್ಸಕರ ತಂಡ ಬೇಕಿಲ್ಲ. ಆಸ್ಪತ್ರೆಗೆ ಸಾಕಷ್ಟು ಕಾಸು ತಾರದ ವೈದ್ಯರನ್ನು ಓಡಿಸುವ ತಂತ್ರಗಾರಿಕೆ ಬೇಕು!

ಹೀಗೆ ಆಸ್ಪತ್ರೆಯ ಆಡಳಿತದ ಶಕ್ತಿ ಕೇಂದ್ರ ವೈದ್ಯರ ಕೈಯಿಂದ ದಾಟಿ ಆಡಳಿತಕಾರ ಕಪಿಮುಷ್ಟಿಗೆ ಎಂದೋ ವರ್ಗವಾಗಿಹೋಗಿದೆ. ಆದರೆ ರೋಗಿಗಳ ಪಾಲಿಗೆ ಈ ಸತ್ಯದ ದರ್ಶನ ಇನ್ನೂ ಆಗಿಲ್ಲ. ಏಕೆಂದರೆ ತಂತಮ್ಮ ಕಾರ್ಪೊರೇಟ್ ಕೋಣೆಗಳಲ್ಲಿ ಕೂತ ಈ ಸರ್ವಶಕ್ತ ಆಡಳಿತಕಾರರು ರೋಗಿಗಳ ಕಣ್ಣಿಗೆ ಕಾಣುವುದೇ ಇಲ್ಲ! ರೋಗಿಗಳ, ಅವರ ಕುಟುಂಬವರ್ಗದವರ ಕಣ್ಣಿಗೆ ಕಾಣುವುದು ಚಿಕಿತ್ಸೆ ನೀಡುವ ವೈದ್ಯರು ಮಾತ್ರ. ತಮ್ಮ ಕಣ್ಣಿಗೆ ಕಂಡದ್ದೇ ಸತ್ಯ ಎಂದು ಭಾವಿಸುವ ರೋಗಿಗಳ ಪರಿವಾರಗಳಿಗೆ ಈ ದಿನಕ್ಕೂ ವೈದ್ಯರೇ ಆಸ್ಪತ್ರೆಯನ್ನು ನಡೆಸುವ, ಅದರ ಲಾಭವನ್ನು ಕಬಳಿಸುವ ಮೂಲಧಾತು!

ಸಮಸ್ಯೆ ಉದ್ಭವಿಸುವುದು ಇಲ್ಲೇ! ರೋಗಿಯ ಪರಿವಾರಕ್ಕೆ ವಸ್ತುಸ್ಥಿತಿ ತಿಳಿದಿಲ್ಲ. ರೋಗಿಯ ಚಿಕಿತ್ಸೆಗೆ ಆಗುವ ಖರ್ಚಿನ ಬಹುಪಾಲು ವೈದ್ಯರಿಗೆ ಸೇರುತ್ತಿಲ್ಲ ಎಂಬುದು ಅವರಿಗೆ ತಿಳಿದಿಲ್ಲ! ಚಿಕಿತ್ಸೆಯ ವೆಚ್ಚದಲ್ಲಿ ರಿಯಾಯತಿ ನೀಡುವ ಸಾಮರ್ಥ್ಯ ಈಗ ವೈದ್ಯರಿಗೆ ಇಲ್ಲ ಎಂದು ಅವರಿಗೆ ಗೊತ್ತಿಲ್ಲ; ಚಿಕಿತ್ಸೆ ಬರೆಯುವುದನ್ನು, ಶಸ್ತ್ರಚಿಕಿತ್ಸೆ ಮಾಡುವುದನ್ನು ಬಿಟ್ಟರೆ ಉಳಿದ ಯಾವ ಪ್ರಕ್ರಿಯೆಯೂ ವೈದ್ಯರ ನಿಲುವಿನಲ್ಲಿ ಇಲ್ಲ ಎಂಬುದು ಅವರಿಗೆ ಅರಿವಿಲ್ಲ; ರೋಗಿಗೆ ಯಾವ ಔಷಧ ಸಂಸ್ಥೆಯ ಮದ್ದುಗಳನ್ನು ಉಪಯೋಗಿಸಬೇಕು ಎಂಬ ನಿರ್ಧಾರ ಕೂಡ ತನದಲ್ಲ, ಅದು ಆಡಳಿತ ಮಂಡಲಿಯದ್ದು ಎಂಬ ಸತ್ಯ ಅವರಿಗೆ ಯಾವ ವೈದ್ಯ ತಾನೇ ಹೇಳಿಯಾನು?

ಯಾವ ದಿನದಂದು MBA ಹಿನ್ನೆಲೆಯ ಆಡಳಿತಕಾರ ಆಸ್ಪತ್ರೆಯ ಅಧಿಕಾರ ವಹಿಸಿದನೋ, ಅಂದೇ ಆಸ್ಪತ್ರೆ ಚಿಕಿತ್ಸಾತಾಣದಿಂದ ಬದಲಾಗಿ ವ್ಯಾವಹಾರಿಕ ಕಸುಬು ಆಯಿತು. ವ್ಯಾಪಾರೀ ನಿಯಮಗಳು ಅಲ್ಲಿ ಸ್ಥಾಪಿತವಾದವು. ಈ ಸ್ಥಿತ್ಯಂತರ ವೈದ್ಯರಿಗೆ ಗೊತ್ತು. ಆದರೆ ರೋಗಿಗಳ ಪರಿವಾರಕ್ಕೆ ಗೊತ್ತಿಲ್ಲ. ಅವರ ಪ್ರಕಾರ ವೈದ್ಯರು ದುರಾಸೆಕೋರರು; ಚಿಕಿತ್ಸಾವೆಚ್ಚವನ್ನು ಏರಿಸಿ ತಮ್ಮ ಜೇಬು ತುಂಬಿಕೊಳ್ಳುವ ದುರಾತ್ಮರು;  ಅವರ ಅತೀ ಆಸೆಯಿಂದಲೇ ಚಿಕಿತ್ಸೆಯ ವೆಚ್ಚ ಆಕಾಶಕ್ಕೆ ಏರಿದೆ; ನಮ್ಮ ದುಡಿಮೆಯಿಂದ ಅವರಿಗೆ ನಾವೇಕೆ ಸಿರಿವಂತಿಕೆ ನೀಡಬೇಕು? ಮಾಡಿದ ಖರ್ಚಿಗೆ ಪ್ರತಿಫಲ ಬೇಡವೇ?

ಈ ಪ್ರತಿಫಲದ ಪ್ರಶ್ನೆಯೇ ಒಗಟು! ಆಸ್ಪತ್ರೆ ಎಂದರೆ ವ್ಯಾಪಾರ ಎಂದು ಭಾವಿಸಿರುವ ಆಡಳಿತ ಮಂಡಳಿಗೆ ಪ್ರತಿಫಲ ಎಂಬ ಮಾತಿನ ಅರ್ಥಕ್ಕೆ “ಬೇರೆ ಜಾಗದಲ್ಲಿ ಇಷ್ಟು ಹಣ ತೊಡಗಿಸಿದ್ದಾರೆ ಲಾಭ ಎಷ್ಟು ಬರುತ್ತಿತ್ತು?” ಎಂಬ ಪ್ರಶ್ನೆಯೇ ಆಧಾರ. ಆಸ್ಪತ್ರೆಗಳ ನಿರ್ವಹಣೆಯಲ್ಲಿ ಖರ್ಚು ಜಾಸ್ತಿ. ಹೂಡಿಕೆದಾರನಿಗೆ ಲಾಭ ಕಡಿಮೆ ಎಂದರೆ, ಹಣ ನೀಡುವವರು ತಾವು ನೀಡಿದ ಪ್ರತೀ ರೂಪಾಯಿಗೇ ಅಧಿಕ ಮೌಲ್ಯ ಪಡೆಯುತ್ತಿದ್ದಾರೆ ಎಂದೇ ಅರ್ಥವಲ್ಲವೇ? ಅಂದರೆ ರೋಗಿಯ ಪರಿವಾರ ಕಡಿಮೆ ಕಾಸು ಕೊಟ್ಟು ಅಧಿಕ ಮೌಲ್ಯ ಪಡೆಯುತ್ತಿದೆ ಎಂದು ಆಡಳಿತಕಾರರ ನಂಬಿಕೆ.

ರೋಗಿಯ ಪರಿವಾರಕ್ಕೆ ಈ ಪ್ರತಿಫಲ ಪದದ ಅರ್ಥವೇನು? ರೋಗಿ ಬದುಕಬೇಕು ಎಂಬ ಒಂದೇ ಆಕಾಂಕ್ಷೆಯಿಂದ ಆಸ್ಪತ್ರೆಗೆ ದಾಖಲಾಗುವ ಅವರು, ಖರ್ಚು ಎಷ್ಟೇ ಆದರೂ ಸರಿ, ರೋಗಿಯ ಪ್ರಾಣ ಉಳಿಯಲಿ ಎಂಬ ಪ್ರತಿಫಲದಿಂದ ಕೇಳಿದಷ್ಟು ಹಣ ಕಟ್ಟುತ್ತಾರೆ. ಅಂದರೆ ಪ್ರತಿಫಲ ಎಂಬುದು ಅವರ ಮನಸ್ಸಿನಲ್ಲಿ ಹಣ ಮತ್ತು ಪ್ರಾಣಗಳ ಸಮೀಕರಣ. ಸಾಕಷ್ಟು ಹಣವೂ ಹೋಯಿತು, ಪ್ರಾಣವೂ ಉಳಿಯಲಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗುವ ಅಂಶವಾಗುತ್ತದೆ. ಕೇವಲ ಹಣವೊಂದೇ ಪ್ರಾಣವನ್ನು ಉಳಿಸಲಾರದಷ್ಟೇ? ಈ ರೀತಿಯ ವ್ಯವಹಾರವೇ ಅರ್ಥಹೀನ ಎಂಬುದು ಆ ಘಳಿಗೆಯಲ್ಲಿ ಅವರಿಗೆ ಅರ್ಥಮಾಡಿಕೊಳ್ಳುವುದು ಕಠಿಣ. ಅವರ ಕಷ್ಟಾರ್ಜಿತ ಹಣವು ರೋಗಿಯ ಪ್ರಾಣವನ್ನು ಉಳಿಸದೇ ಹೋದಾಗ ಅದು ಕ್ರೋಧಕ್ಕೆ ತಿರುಗುತ್ತದೆ; ದುರ್ಬಲ ಮನಸ್ಸಿನವರಿಗೆ ಆ ಕ್ರೋಧ ಹಲ್ಲೆ ನಡೆಸಲು ಕಾರಣವಾಗುತ್ತದೆ.

ಹಲ್ಲೆಗಳು ಏಕೆ ಆಗುತ್ತಿವೆ? ಎಂಬ ಪ್ರಶ್ನೆಗೆ ಸರಿಸುಮಾರು ಉತ್ತರ ದೊರಕಿದರೂ, ವೈದ್ಯರ ಮೇಲೆ ಏಕೆ? ಎಂಬುದನ್ನು ನೋಡಬೇಕು.

ಪ್ರತಿಫಲ ಕಡಿಮೆ ಎಂದು ಕೊರಗುವ ಆಡಳಿತ ಮಂಡಳಿ ಮತ್ತು ಪ್ರತಿಫಲ ದೊರಕಲಿಲ್ಲ ಎಂದು ಕ್ರೋಧಗೊಂಡ ರೋಗಿಯ ಪರಿವಾರದ ಮಧ್ಯೆ ಸೇತುವೆಯಾಗಿ ಇಬ್ಬದಿಯಿಂದಲೂ ಹೊಡೆತ ತಿನ್ನುವವರು ಬಡಪಾಯಿ ವೈದ್ಯರು. ಆಸ್ಪತ್ರೆಯ ಲಾಭಾಂಶವನ್ನು ವೃದ್ಧಿಸಬೇಕು ಎಂದು ಆಡಳಿತ ಮಂಡಳಿ ನಿರ್ಧರಿಸಿದರೆ ಅದನ್ನು ನೆರವೇರಿಸುವ ಜವಾಬ್ದಾರಿ ವೈದ್ಯರದ್ದು. ಹೇಗೆ ಮಾಡಬಹುದು? ಎಂಬ ವೈದ್ಯರ ಪ್ರಶ್ನೆಗೆ ಆಡಳಿತ ಮಂಡಳಿಯಿಂದ ಸರಿಯಾದ ಉತ್ತರವಿಲ್ಲ! ಲಾಭಾಂಶ ವೃದ್ಧಿಸದ ವೈದ್ಯರನ್ನು ಆಸ್ಪತ್ರೆ ಕೆಲಸದಿಂದ ಎತ್ತಂಗಡಿ ಮಾಡಲೂಬಹುದು. ಈ ಅಭದ್ರತೆ ಹಲವಾರು ವೈದ್ಯರನ್ನು ತಪ್ಪು ದಾರಿಗೆ ಎಳೆಯುವುದು ಸಹಜ. ವಿದ್ಯಾಭ್ಯಾಸಕ್ಕೆ ಸಾಲ ಮಾಡಿ ಅದನ್ನು ತೀರಿಸುವ ಹಂತದಲ್ಲಿರುವ, ಮನೆಯ ಜವಾಬ್ದಾರಿ ಹೊತ್ತಿರುವ, ಉತ್ತಮ ಜೀವನದ ಕನಸನ್ನು ಕಣ್ಣುಗಳಲ್ಲಿ ತುಂಬಿಕೊಂಡಿರುವ ಕಿರಿಯ ವೈದ್ಯರಿಗೆ ಈ ಅಸುರಕ್ಷತೆಯ ಭಾವ ಬದುಕನ್ನೇ ಝರ್ಝರಗೊಳಿಸಬಲ್ಲದು. ಇಂತಹ ಸಂದರ್ಭಗಳಲ್ಲಿ ತಪ್ಪು-ಒಪ್ಪುಗಳ ಮಧ್ಯದ ವ್ಯತ್ಯಾಸ ಅಳಿಯಬಹುದು. ಪುಣ್ಯವಶಾತ್, ಕೆಲವು ಸಹೃದಯೀ ಹಿರಿಯ ವೈದ್ಯರು ಇಂತಹ ಕಿರಿಯ ವೈದ್ಯರ ಬೆಂಬಲಕ್ಕೆ ಬಹಳ ಸಾರಿ ನಿಲ್ಲುತ್ತಾರೆ.

ಆದರೆ ಆಕ್ರೋಶಿತ ರೋಗಿಯ ಪರಿವಾರದ ದೌರ್ಜನ್ಯವನ್ನು ಎದುರಿಸುವುದು ಎಂತಹ ವೈದ್ಯನಿಗೂ ಸಾಧ್ಯವಿಲ್ಲ. ತನ್ನದಲ್ಲದ ಹೊಣೆಗೆ ತಾನು ದೈಹಿಕ, ಮಾನಸಿಕ ಶಿಕ್ಷೆಗೆ ಒಳಗಾಗುವ ಈ ಪ್ರಕ್ರಿಯೆ ವೈದ್ಯರ ಜೀವನದ ಮೂಲೋದ್ದೇಶವನ್ನೇ ನಾಶ ಮಾಡಬಲ್ಲದು. ಅಂತಹ ಹಲ್ಲೆಗೆ ಒಳಗಾದ ವೈದ್ಯ ಪುನಃ ಸಹಜವಾಗುವುದು ಬಹಳ ಕಷ್ಟ. ಮನುಷ್ಯತ್ವದ ಮೇಲೆ, ಒಳ್ಳೆಯತನದ ಮೇಲೆ ನಂಬಿಕೆಯೇ ನಾಶವಾಗುವ ಸಂದರ್ಭಗಳಿವು. 

ಕೇವಲ ದೈಹಿಕ ದೌರ್ಜನ್ಯವಷ್ಟೇ ಅಲ್ಲ. ವೈದ್ಯರು ಕಾನೂನಿನ ಆಘಾತಗಳನ್ನೂ ಎದುರಿಸಬೇಕು. ವೈದ್ಯರು ತಪ್ಪು ಮಾಡಿದ್ದಾರೆ ಎಂಬ ಯಾವುದೇ ಗುಮಾನಿ ಇದ್ದರೂ ಸಾಕು; ಅಂತಹ ವೈದ್ಯರ ಮೇಲೆ ಆಸ್ಪತ್ರೆಯ ನಿರ್ದೇಶಕರಲ್ಲಿ, ಆಯಾ ರಾಜ್ಯದ ವೈದ್ಯಕೀಯ ಮಂಡಳಿಯಲ್ಲಿ, ಗ್ರಾಹಕ ವೇದಿಕೆಯಲ್ಲಿ, ಆರಕ್ಷಕ ಠಾಣೆಯಲ್ಲಿ, ಕೆಳಗಿನ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಚ ನ್ಯಾಯಾಸ್ಥಾನದವರೆಗೆ ಎಲ್ಲಿ ಬೇಕಾದರೂ ದೂರು ನೀಡಿ ಪ್ರಕರಣ ದಾಖಲಿಸಬಹುದು. ಆಸ್ಪತ್ರೆಯ ಮೇಲೆ ದೂರು ದಾಖಲಾದರೂ ಜೊತೆಗೆ ವೈದ್ಯರದ್ದೂ ಹೊಣೆ. ಕೇವಲ ವೈದ್ಯರ ಮೇಲೆ ದೂರು ದಾಖಲಾದರೆ ಎಷ್ಟೋ ಬಾರಿ ಆಸ್ಪತ್ರೆ ವೈದ್ಯರ ಬೆಂಬಲಕ್ಕೆ ನಿಲ್ಲದೆ ಹೋಗಬಹುದು. ಇದರ ಮೇಲೆ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಏನಾದರೂ ರಸವತ್ತಾದ ಸುದ್ದಿಗೆ ಕಾಯುವ ದೃಶ್ಯ ಮಾಧ್ಯಮಕ್ಕೆ ತನ್ನ ತೀರ್ಪು ನೀಡುವ ಅವಸರ. ಅವರಿಗೆ ವಿಚಾರಣೆಯೂ ಬೇಡ; ಸತ್ಯವೂ ಬೇಡ. ಮತ್ತೊಬ್ಬರ ಜೀವನ ಅವರಿಗೆ ಮನರಂಜನೆ ಮಾತ್ರ.

ಕೇವಲ ದೊಡ್ಡದೊಡ್ಡ ಆಸ್ಪತ್ರೆಗಳ ಮೇಲೆ ಮಾತ್ರ ಈ ರೀತಿಯ ಹಲ್ಲೆ ಆಗುತ್ತಿದೆಯೇ? ಸರ್ಕಾರಿ ಆಸ್ಪತ್ರೆ, ಸಣ್ಣಸಣ್ಣ ನರ್ಸಿಂಗ್ ಹೋಂ ಗಳ ಮೇಲೂ ಆಗುತ್ತಿವೆ ಅಲ್ಲವೇ? ಇದಕ್ಕೆ ಕಾರಣವೇನು? ಎಂಬುದು ಪ್ರಶ್ನೆ. ಈ ಮಾತು ಸರಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಯಾವುದೇ ಕಾನೂನಿನ ಭಂಗಕ್ಕೆ ಶಿಕ್ಷೆ ಆಗದೆ ಹೋದರೆ ಹಲ್ಲೆಕೋರರಿಗೆ ಒಂದು ಬಗೆಯ ಧೈರ್ಯ ಹುಟ್ಟುತ್ತದೆ. ತಾನು ಮಾಡಿದ್ದು ಸರಿ ಎಂಬ ಮಾನಸಿಕ ಸ್ಥಿತಿ ಏರ್ಪಡುತ್ತದೆ. ಅದರ ಮೇಲೆ ರಾಜಕಾರಣ ಈ ವಿಷಯದಲ್ಲಿ ತಲೆ ಹಾಕಿ ಹಲ್ಲೆಕೊರರನ್ನು ಸಮರ್ಥಿಸಿಕೊಳ್ಳುವ ಒಂದು ಮಾತನ್ನು ಆಡಿದರೂ ಸಾಕು; ಇಂತಹ ಹಲ್ಲೆಕೋರರ ಸಂಖ್ಯೆ ನೂರಾರು ಪಟ್ಟು ಬೆಳೆಯುತ್ತದೆ. ತಮ್ಮ ಹೀರೋಗಿರಿ ಮೆರೆಯಲು ಅಂತಹವರು ಅವಕಾಶಕ್ಕೆ ಕಾಯುತ್ತಾರೆ. ಯಾವುದೋ ಹಳೆಯ ದ್ವೇಷವನ್ನೋ, ವೈಮನಸ್ಯವನ್ನೋ ಕಾರಣವಾಗಿ ಇಟ್ಟುಕೊಂಡು ಸಮಯ ಸಿಕ್ಕಾಗ ಅದನ್ನು ತೀರಿಸಿಕೊಳ್ಳುತ್ತಾರೆ. ಎಷ್ಟೋ ಬಾರಿ ಹಲ್ಲೆ ಮಾಡಿದವರಿಗೂ, ಮೃತರೋಗಿಯ ಪರಿವಾರದವರಿಗೂ ಸಂಬಂಧವೇ ಇರುವುದಿಲ್ಲ. ಹೀಗಾಗಿ ಒಮ್ಮೆ ಭುಗಿಲೆದ್ದ ಈ ರೀತಿಯ ಚಿಂಗಾರಿ ನೂರಾರು ರೂಪಗಳನ್ನು ಪಡೆದು ಅವಕಾಶ ಇದ್ದೆಡೆಯೆಲ್ಲಾ ಸುಡತೊಡಗುತ್ತದೆ. ಈ ಅಪಾಯಕಾರಿ ಪ್ರವೃತ್ತಿ ಅತ್ಯಂತ ಹೇಯವಾದದ್ದು. ಇದರ ದೂರಗಾಮಿ ಪರಿಣಾಮಗಳು ತೀವ್ರರೂಪ ಪಡೆದು ರೋಗಿಗಳ ಚಿಕಿತ್ಸೆಯ ಪಾಲಿಗೆ ಪ್ರತಿಕೂಲವಾಗಬಹುದು. ಇದನ್ನು ಮೊಳಕೆಯಲ್ಲಿ ಚಿವುಟಿ ಹಾಕುವ ಹೊಣೆ ವ್ಯವಸ್ಥೆಯದ್ದು. ಆದರೆ ವ್ಯವಸ್ಥೆಯೆಂಬ ಕುಂಭಕರ್ಣ ಎದ್ದರೆ ತಾನೇ?

ಒಟ್ಟಿನಲ್ಲಿ, ಯಾರದೋ ತಪ್ಪು; ಯಾರದೋ ಲಾಠಿ – ಒದೆ ತಿಂದವರು ಮಾತ್ರ ವೈದ್ಯರು ಎಂಬ ದಯನೀಯ ಸ್ಥಿತಿಯಲ್ಲಿ ವೈದ್ಯರಂಗ ಬಂದು ತಲುಪಿದೆ. ಇಲ್ಲಿ ಎಲ್ಲರೂ ತೀರ್ಪು ನೀಡುವವರೇ! ಆದರೆ ಅಸಲಿ ಪ್ರಶ್ನೆ ಮಾತ್ರ ಯಾರೂ ಕೇಳುತ್ತಿಲ್ಲ. ದೇಶದ ಪ್ರಜೆಗಳ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರದ ಹೊಣೆಗಾರಿಕೆ ಏನು? ಈ ಹೊಣೆಗಾರಿಕೆಯಲ್ಲಿ ಸರ್ಕಾರ ವಿಫಲವಾದರೆ ದೇಶದ ಕಾನೂನಿನಲ್ಲಿ ಪ್ರಜೆಗಳನ್ನು ರಕ್ಷಿಸುವ ಯಾವ ವಿಧಾನಗಳಿವೆ? ಅದನ್ನು ನಿರ್ವಹಿಸಬೇಕಾದವರು ಯಾರು? ಪ್ರಾಯಶಃ ಈ ಪ್ರಶ್ನೆಗಳನ್ನು ಕೇಳುವವರೂ ಇಲ್ಲ; ಕೇಳಿದರೆ ಉತ್ತರಿಸುವವರೂ ಇಲ್ಲ. ಒಳ್ಳೆಯ ಪರಿಹಾರಗಳನ್ನು ಹೇಳುವ ಮಂದಿ ಇದ್ದಾರೆ. ಆದರೆ ಅಂತಹ ಪರಿಹಾರಗಳನ್ನು ಕೇಳುವ ಒಳ್ಳೆಯ ಸರ್ಕಾರಗಳು, ಒಳ್ಳೆಯ ವ್ಯವಸ್ಥೆ ನಮ್ಮ ನಸೀಬಿನಲ್ಲಿ ಇಲ್ಲ ಅಷ್ಟೇ. ಜನತೆ ಎಚ್ಚೆತ್ತುಕೊಂಡರೆ ಉಳಿಗಾಲ; ಹೀಗೆ ಅನಾಗರೀಕವಾಗಿ ಮುಂದುವರೆದರೆ ಮುಂದಿನ ಪೀಳಿಗೆಗೆ ಉತ್ತರಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ