ಮಂಗಳವಾರ, ಡಿಸೆಂಬರ್ 19, 2017

ಹೂವಿನ ಗುಚ್ಚಕ್ಕೆ ಹಣ ನೀಡಬೇಕು; ಕಲ್ಲುಗಳು ಉಚಿತ!


ರೋಹಿತ್ ಚಕ್ರತೀರ್ಥರ “ಆಸ್ಪತ್ರೆ ಸೇರುವುದು ಅನಾರೋಗ್ಯಕರ!” (Vikrama Kannada Magazine, December 2017) ಎಂಬ ಕುತೂಹಲಕಾರಿ ಶೀರ್ಷಿಕೆಯ ಲೇಖನ ಹಲವಾರು ಅಂಶಗಳನ್ನು ತೆರೆದಿಡುತ್ತದೆ. ಅದರಲ್ಲಿ ಹಲವು ಈಗಾಗಲೇ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅಂಶಗಳಾದರೆ ಇನ್ನು ಕೆಲವು ಲೇಖಕರ ಅಂದಾಜು ತೀರ್ಮಾನಗಳು. ಆ ಲೇಖನದ ಕೆಲವು ಅಂಶಗಳನ್ನು ಸ್ಪಷ್ಟಪಡಿಸಲು ಈ ಪ್ರತಿಕ್ರಿಯೆ.

ರೋಹಿತ್ ಚಕ್ರತೀರ್ಥರು ಮೂಲತಃ ಗಣಿತಜ್ಞರು. ಸಂಖ್ಯೆಗಳ ಜೊತೆ ಅವರಿಗಿರುವ ಆತ್ಮೀಯ ಸಂಬಂಧ ಎಲ್ಲರಿಗೂ ಸಾಧ್ಯವಿಲ್ಲ! ಅಂಕಿಗಳ ಮೇಲೆ “ಸಂಖ್ಯಾಂ ಅರ್ಥೋನುಧಾವತಿ” ಎಂಬಂತೆ ಅವರ ಹಿಡಿತ! ಆ ರೀತಿಯ ಅರ್ಥಸಾಧ್ಯತೆ ಇತರರಿಗೆ ಕ್ಲಿಷ್ಟವಾಗಬಹುದು. ಅಂತಹ ಕೆಲವು ಅಂಶಗಳತ್ತ ಗಮನ ಹರಿಸಬಹುದು.

ಮೊದಲನೆಯದಾಗಿ, ಲೇಖಕರು ಉಲ್ಲೇಖಿಸುವ ೧೯೯೯ ರ ವರದಿ. ಈ ವಿಸ್ತೃತ ವರದಿ ಸಂಪೂರ್ಣವಾಗಿ ಅಂತರ್ಜಾಲದಲ್ಲಿ ಲಭ್ಯವಿದೆ. ೩೧೨ ಪುಟಗಳ ಗಾತ್ರದ ಈ ಪುಸ್ತಕದ ಮೊದಲಲ್ಲಿ ಅದರ ಸಾರಾಂಶವನ್ನು ನೀಡಲಾಗಿದೆ. ಅಮೆರಿಕಾದ ಎರಡು ಆಸ್ಪತ್ರೆಗಳಲ್ಲಿ ಲಭ್ಯವಿರುವ ವೈದ್ಯಕೀಯ ವರದಿ ಮತ್ತು ರೋಗಿಯ ಖಾಯಿಲೆಯ ಕುರಿತಾದ ಸಾರಾಂಶಗಳ ವಿವರವಾದ ಅಧ್ಯಯನದಿಂದ ಬಂದ ಪರಿಮಾಣಗಳನ್ನು ಅಮೇರಿಕಾದ ಇಡೀ ೩೪ ಕೋಟಿ (ಆಗಿನ) ಜನಸಂಖ್ಯೆಗೆ ಹಿಗ್ಗಿಸಿ ಬರೆದಿದೆ. ಇದರಲ್ಲಿ ಒಂದು ಆಸ್ಪತ್ರೆಯ ದಾಖಲೆಗಳು 1984 ರದ್ದು. ಎರಡನೆಯದ್ದು ೧೯೯೨ ರದ್ದು. ಎರಡನೆಯ ಆಸ್ಪತ್ರೆಯಲ್ಲಿ ದೊರಕಿದ ಸಂಖ್ಯೆಗಳನ್ನು ಇಡೀ ಅಮೇರಿಕಾ ದೇಶದ ಜನಸಂಖ್ಯೆಗೆ ಹಿಗ್ಗಿಸಿದರೆ ವೈದ್ಯಕೀಯ ತಪ್ಪುಗಳಿಂದ ಸುಮಾರು ೪೪,೦೦೦ ರೋಗಿಗಳು ಮರಣ ಹೊಂದಿರಬಹುದು ಎಂದು ಅಂದಾಜಿಸಲಾಯಿತು. ಅದೇ, ಮೊದಲನೇ ಆಸ್ಪತ್ರೆಯ ಸಂಖ್ಯೆಯನ್ನು ಹಿಗ್ಗಿಸಿದರೆ ಈ ಪ್ರಮಾಣ ೯೮,೦೦೦ ದ ವರೆಗೆ ಆಗಬಹುದು ಎಂದು ಊಹೆ. ಈ ಎರಡೂ ಸಂಖ್ಯೆಗಳೂ ಊಹೆಯೇ. ಒಂದು ಬೀದಿಯಲ್ಲಿ ನಾಲ್ಕು ಚಿಲ್ಲರೆ ಅಂಗಡಿ ಇದ್ದರೆ ಇಡೀ ಊರಿನ ೯೦೦ ರಸ್ತೆಗಳಲ್ಲಿ ೩೬೦೦ ಚಿಲ್ಲರೆ ಅಂಗಡಿ ಇವೆ ಎಂಬ ಲೆಕ್ಕಾಚಾರ ಕಡಿಮೆಯೂ ಆಗಬಹುದು; ಹೆಚ್ಚೂ ಆಗಬಹುದು. ಆದರೆ ಬೇರೆ ಯಾರೂ ಸರಿಯಾದ ಲೆಕ್ಕಾಚಾರ ಮಾಡಿಲ್ಲವಾದರಿಂದ ಅದನ್ನು ಒಪ್ಪಿಕೊಳ್ಳಬೇಕು.

ರೋಹಿತ್ ರವರ ಲೇಖನದಲ್ಲಿ ದೊಡ್ಡ ಸಂಖ್ಯೆ ಮಾತ್ರವಿದೆ. ಆದರೆ ಅವರು ಅನುಪಾತವನ್ನು ಹೇಳುವುದಿಲ್ಲ. ಚಿಕಿತ್ಸೆ ಪಡೆದಿರುವ ಎರಡು ಕೋಟಿ ೩೦ ಲಕ್ಷ ರೋಗಿಗಳ ಪೈಕಿ ೪೪,೦೦೦ ಜನರಿಗೆ ಹೀಗೆ ಮರಣ ಸಂಭವಿಸಿದೆ. ಅನುಪಾತ 0.೦೦19, ಅಂದರೆ ರೋಗಿಗಳ ಪೈಕಿ ಎರಡು ಕೋಟಿ ಇಪ್ಪತ್ತ ಒಂಬತ್ತು ಲಕ್ಷ ಐವತ್ತಾರು ಸಾವಿರ ಮಂದಿಯಲ್ಲಿ ತಪ್ಪುಗಳು ಜರುಗಿಲ್ಲ. ಈ ೪೪,೦೦೦ ಸಂಖ್ಯೆಯ ಅಂದಾಜಿಗೆ ಹೇಗೆ ಬರಲಾಯಿತು ಎಂಬ ಮಾಹಿತಿ ರೋಹಿತ್ ರವರ ಲೇಖನದಲ್ಲಿ ಇಲ್ಲ. “ಇಡೀ ದೇಶದ ಒಂದೊಂದು ಆಸ್ಪತ್ರೆಯನ್ನೂ ಎಡತಾಕಿ, ಸಾವುಗಳ ವರದಿ ತರಿಸಿಕೊಂಡು...” ಎಂದು ಲೇಖಕರು ಬರೆದಿರುವ ಮಾಹಿತಿ ಅವರ ಉತ್ಪ್ರೇಕ್ಷಿತ ಕಲ್ಪನೆ. ಅಮೇರಿಕ ದೇಶದ ವಿಸ್ತಾರ, ಅಲ್ಲಿರುವ ಆಸ್ಪತ್ರೆಗಳ ಪರಿಕಲ್ಪನೆ ಇರುವ ಯಾರಿಗಾದರೂ ಈ ಮಾತುಗಳಲ್ಲಿನ ಉತ್ಪ್ರೇಕ್ಷೆ ತಿಳಿಯುತ್ತದೆ. ಈ ವರದಿ ತಯಾರಿಸಲು ನೋಡಿದ್ದು ಕೇವಲ ಎರಡೇ ಆಸ್ಪತ್ರೆಗಳ ವೈದ್ಯಕೀಯ ದಾಖಲೆಗಳನ್ನು ಮಾತ್ರ; ಲೇಖಕರು ಹೇಳುವಂತೆ ಅಮೆರಿಕಾದ ಎಲ್ಲಾ ಆಸ್ಪತ್ರೆಗಳನ್ನೂ ಅಲ್ಲ. ಆಸಕ್ತ ಓದುಗರು To Err Is Human: Building a Safer Health System ಎಂಬ ಪುಸ್ತಕವನ್ನು ನೋಡಬಹುದು.

ಹೀಗೆಂದ ಮಾತ್ರಕ್ಕೆ ವೈದ್ಯಕೀಯ ವಲಯವನ್ನು ಸಮರ್ಥಿಸಿದಂತೆ ಆಗುವುದಿಲ್ಲ. ಬೃಹತ್ ಪ್ರಮಾಣದ, “ತಿದ್ದಿಕೊಳ್ಳಬಹುದಾದ ತಪ್ಪುಗಳು” ಜರುಗುತ್ತಿವೆ ಎಂದು ತಿಳಿದು ಕಾರ್ಯೋನ್ಮುಖರಾಗುವುದು ಈ ಸಮೀಕ್ಷೆಯಿಂದ ಆಗಬೇಕಿದ್ದ ಪರಿಣಾಮ. ವರದಿಯ ನೈಜತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅದು ಆಗಬೇಕಾದ್ದೇ ಅಲ್ಲವೇ? ಯಾವಾಗ ನಿಗದಿತ ಮಾನದಂಡಗಳ ಪ್ರಕಾರ ವರದಿ ಸಿದ್ಧವಾಗಿದೆ ಎಂದು ತಿಳಿಯಿತೋ, ಆಗ ಅದನ್ನು ಒಪ್ಪಲಾಯಿತು. ಲೇಖಕರು ತಿಳಿಸಿದಂತೆ ಹಾಹಾಕಾರವೆದ್ದಿದ್ದಾಗಲೀ, ಅಥವಾ ವೈದ್ಯರು ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದಾಗಲೀ ನಡೆಯಲಿಲ್ಲ. ಮುಷ್ಕರವಂತೂ ದೂರದ ಮಾತು. ಅಂತಹ ವಿಪರೀತ ಪರಿಣಾಮಗಳ ಅವಶ್ಯಕತೆಯೂ ಇರಲಿಲ್ಲ. ಕಾರಣ: ನಮ್ಮ ದೇಶದಲ್ಲಿ ನಡೆಯುವಂತೆ ಇದು ವೈದ್ಯರ ಚಾರಿತ್ರ್ಯಹರಣದ ಪ್ರಯತ್ನವೇನೂ ಆಗಿರಲಿಲ್ಲ. ಅಥವಾ ಅಮೇರಿಕಾದ ಜನ ನಮ್ಮ ದೇಶದ ಗೂಂಡಾಗಳಂತೆ ವೈದ್ಯರಿಗೆ ಹೊಡೆಯುವುದು, ಆಸ್ಪತ್ರೆಯ ಗಾಜು ಒಡೆಯುವುದು, ಬೆಂಕಿ ಹಚ್ಚುವುದು – ಹೀಗೆಲ್ಲಾ ಮಾಡುವವರೂ ಅಲ್ಲ. ಈ ವರದಿ ಹಿಡಿದು ಅಲ್ಲಿನ ಸರ್ಕಾರ ವೈದ್ಯರ ಹೆಡೆಮುರಿ ಕಟ್ಟಿ ಅವರನ್ನು ಅಪರಾಧಿ ಸ್ಥಾನದಲ್ಲಿ ಕೂಡಿಸುವ ಹುನ್ನಾರಗಳನ್ನೂ ಮಾಡುವುದಿಲ್ಲ. “ಇದು ವ್ಯವಸ್ಥೆಗೆ ಹಿಡಿದ ಕನ್ನಡಿ” ಎಂದು ವೈದ್ಯಕೀಯ ಸಮುದಾಯ ಈ ವರದಿಯನ್ನು ಸ್ವಾಗತಿಸಿತ್ತು. ಪರಿಸ್ಥಿತಿ ಸುಧಾರಿಸಲು ಏನೇನು ಮಾಡಬಹುದು ಎಂಬ ಚರ್ಚೆಗಳು ಆರಂಭವಾದವು. ೧೯೯೯ರ ಈ ವರದಿ ಕೇವಲ ಕಲ್ಲು ಬೀರುವ ಕೆಲಸ ಮಾಡಿರಲಿಲ್ಲ. ತನ್ನ ವರದಿಯಲ್ಲೇ ಇಂತಹ ತಪ್ಪುಗಳನ್ನು ತಡೆಯಬಹುದಾದ ದಾರಿಗಳನ್ನೂ ಚರ್ಚಿಸಿತ್ತು. ಅಮೇರಿಕ ಸರ್ಕಾರ ಮತ್ತು ಅಲ್ಲಿನ ವೈದ್ಯಕೀಯ ರಂಗ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಐದು ವರ್ಷಗಳಲ್ಲಿ, ಸುಮಾರು ೨೫ ಕೋಟಿ ಅಮೆರಿಕನ್ ಡಾಲರ್ ವೆಚ್ಚದಲ್ಲಿ ವರದಿಯಲ್ಲಿದ್ದ ಶಿಫಾರಸುಗಳನ್ನು ಜಾರಿಗೆ ತರುವ ಪ್ರಯತ್ನ ನಡೆಸಿತು. ಐದು ವರ್ಷಗಳಲ್ಲಿ ಈ ಪ್ರಮಾಣವನ್ನು ಶೇ 50 ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಈ ಪ್ರಯತ್ನಗಳು ನಡೆದವು. ಈ ವಿವರಗಳನ್ನು ೨೦೦೫ ನೆ ಇಸವಿಯಲ್ಲಿ ಸಾರಾ ಬ್ಲೀಚ್ ಕಾಮನ್ವೆಲ್ತ್ ಒಕ್ಕೂಟದ ಪತ್ರಿಕೆಯಲ್ಲಿ ವಿವರವಾಗಿ ಪ್ರಕಟಿಸಿದ್ದಾರೆ.

ಎಲ್ಲದಕ್ಕಿಂತ ಮುಖ್ಯವೆಂದರೆ ಇಲ್ಲಿ ನಿರಾಕರಣೆಯ ಪ್ರಶ್ನೆ ಇರಲಿಲ್ಲ. ಸಂಕೀರ್ಣವಾದ ವೈದ್ಯಕೀಯ ರಂಗದಲ್ಲಿ ತಪ್ಪುಗಳು ಘಟಿಸುವುದು ಅಸಾಮಾನ್ಯವಲ್ಲ. ಆದರೆ ಯಾವ ವೈದ್ಯನೂ ಯಾ ದಾದಿಯೂ ಯಾವ ರೋಗಿಯನ್ನೂ ದ್ವೇಷದಿಂದ ಕೊಲೆ ಮಾಡುವುದಿಲ್ಲ. ತಿಳುವಳಿಕೆಯ ಕೊರತೆಯಿಂದಲೋ ಯಾ ನಿರ್ಲಕ್ಷ್ಯದಿಂದಲೋ ತಪ್ಪು ಆಗಬಹುದು – ನಡೆಯುವಾಗ ಎಡವುವಂತೆ. “ರೋಗಿಯ ಜೀವ ತೆಗೆದಿದ್ದರು” ಎಂಬ ಕಟು ಮಾತು ಸಹ್ಯವಲ್ಲ. ರಸ್ತೆ ಅಪಘಾತದಲ್ಲಿ ನಿಮ್ಮ ವಾಹನ ನಿಮ್ಮ ನಿಯಂತ್ರಣ ಮೀರಿ ಯಾರಿಗೋ ಗುದ್ದಿ ಅವರಿಗೆ ಗಾಯವಾದಾಗ ಆಗ “ತಮ್ಮ ವಾಹನ ಹರಿಸಿ ಮೂಳೆ ಮುರಿದು ಕೊಲ್ಲುವ ಪ್ರಯತ್ನ ಮಾಡಿದರು” ಎಂದು ಹೇಳಿದರೆ ನಿಮಗೆ ಎಷ್ಟು ನೋವಾಗುತ್ತದೋ, ವೈದ್ಯರಿಗೂ ಇಂತಹ ಮಾತುಗಳಿಂದ ಅಷ್ಟೇ ನೋವಾಗುತ್ತದೆ. ಹಾಗೆಂದ ಮಾತ್ರಕ್ಕೆ ಯಾವ ಕಾರಣಕ್ಕೂ ವೈದ್ಯಕೀಯ ತಪ್ಪು ಸಮರ್ಥನೀಯವಲ್ಲ. ಇದು ಮಾತಿನ ಸೂಕ್ಷ್ಮತೆಯ ಪ್ರಶ್ನೆ. ಇಲ್ಲಿ ಪರಿಣಾಮ ತಿಳಿಯುವುದು ಘಟನೆ ಆದ ಸಾಕಷ್ಟು ಕಾಲದ ನಂತರ. ಅದು ಜರುಗುತ್ತಿರುವ ಕಾಲದಲ್ಲಿ ಕಣ್ಣಿಗೆ ಗೋಚರಿಸದೆ ಹೋಗಬಹುದು. ವ್ಯವಸ್ಥೆಯನ್ನು ಶಕ್ತಗೊಳಿಸಿ ಇದನ್ನು ಸರಿಯಾದ ಸಮಯದಲ್ಲಿ ಗಮನಿಸುವುದು ಹೇಗೆ ಎಂಬುದು ಪ್ರಶ್ನೆ.

ಇಲ್ಲಿ ಎರಡು ಬೇರೆ ಬೇರೆ ವ್ಯಾಖ್ಯಾನಗಳನ್ನು ಗಮನಿಸಬೇಕು: ಮೊದಲನೆಯದು – ವೈದ್ಯಕೀಯ ತಪ್ಪು ಅಥವಾ ನ್ಯೂನತೆ (medical error) – ಇದರಲ್ಲಿ ಯಾರ ಅಲಕ್ಷ್ಯವೂ ಇರುವುದಿಲ್ಲ. ಮೊದಲೇ ಊಹಿಸಲಾಗದ, ತಡೆಗಟ್ಟಲಾಗದ ಒಂದು ಪರಿಣಾಮ. ಉದಾಹರಣೆಗೆ: ಮೊದಲ ಬಾರಿ ಯಾವುದೋ ಜೀವಿರೋಧಕ (antibiotic) ಮಾತ್ರೆ ನುಂಗುತ್ತಿರುವ ರೋಗಿಗೆ ಅಂತಹ ಔಷಧದ ಅಲರ್ಜಿ ಇದೆಯೋ ಇಲ್ಲವೋ ಹೇಳಲಾಗದು. ಮಾತ್ರೆ ನುಂಗಿ ಆದ ಅಲರ್ಜಿ ಈ ಪರಿಭಾಷೆಯ ಅಡಿಯಲ್ಲಿ ಬರುತ್ತದೆ. ಆದರೆ, ಆ ರೋಗಿ ತನ್ನ ಔಷಧ ಅಲರ್ಜಿಯ ವಿಷಯವಾಗಿ ಮೊದಲೇ ವೈದ್ಯರಿಗೆ ತಿಳಿಸಿದ್ದರೂ ವೈದ್ಯರು ಅದೇ ಔಷಧವನ್ನು ನೀಡಿ ಆ ರೋಗಿಯ ತೊಂದರೆಗೆ ಯಾ ಮರಣಕ್ಕೆ ಕಾರಣವಾದರೆ ಅದು ವೈದ್ಯಕೀಯ ನಿರ್ಲಕ್ಷ್ಯ (medical negligence). ವೈದ್ಯಕೀಯ ನ್ಯೂನತೆಕ್ಕೆ ಕಾನೂನಿನಲ್ಲಿ ರಿಯಾಯತಿ ಇದೆ; ಅದೇ ಕಾನೂನು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಶಿಕ್ಷೆ ನೀಡುತ್ತದೆ. ಆದರೆ ರೋಹಿತ್ ಅವರ ಲೇಖನದಲ್ಲಿ ಈ ಎರಡೂ ವ್ಯಾಖ್ಯಾನಗಳನ್ನೂ ಒಟ್ಟಿಗೆ ಸೇರಿಸಲಾಗಿದೆ. ಮೂಲ ಲೇಖನದಲ್ಲಿ ಇವೆರಡರ ನಡುವೆ ಇರುವ ವ್ಯತ್ಯಾಸ ರೋಹಿತ್ ಅವರ ಲೇಖನದಲ್ಲಿ ಇಲ್ಲ. ಈ ನ್ಯೂನತೆ ಮತ್ತು ಅಲಕ್ಷ್ಯ ಎಂಬ ಎರಡನ್ನೂ ಅವರು “ಅವಘಡ” ಎಂಬ ಪದದಲ್ಲಿ ವಿಲೀನ ಮಾಡಿದ್ದಾರೆ.

ಆ ಅವಘಡಗಳ ಕುರಿತು ವಿಮರ್ಶೆ ಮಾಡುವ ಮುನ್ನ ವೈದ್ಯರು ಕೆಲಸ ಮಾಡುವ ವಿಧಾನವನ್ನು ತಿಳಿದುಕೊಳ್ಳಬೇಕು. ಒಂದು ಉದಾಹರಣೆ ಇದನ್ನು ಸ್ಪಷ್ಟವಾಗಿಸುತ್ತದೆ. ಒಬ್ಬ ರೋಗಿಗೆ ತಲೆನೋವು ಇದೆ ಎಂದು ಪ್ರಾಥಮಿಕ ನೆಲೆಗಟ್ಟಿನ ವೈದ್ಯರ (primary care physician) ಬಳಿ ಬಂದಿದ್ದಾರೆ ಎಂದು ಭಾವಿಸಿ. ತಲೆನೋವಿಗೆ ಸೈನಸ್ ಸಮಸ್ಯೆಯಿಂದ ಹಿಡಿದು ಮೆದುಳಿನ ಕ್ಯಾನ್ಸರ್ ವರೆಗೆ ನೂರಾರು ಕಾರಣಗಳು ಇರಬಹುದು. ಈ ಹಂತದ ವೈದ್ಯರು ರೋಗಿಯ ಕಾಯಿಲೆಯ ವಿವರಗಳನ್ನು ಕೇಳಿ ತಿಳಿದು, ದೈಹಿಕ ಪರೀಕ್ಷೆ ಮಾಡಿ ಈ ಕಾರಣಗಳನ್ನು ನೂರರಿಂದ ಹತ್ತಕ್ಕೆ ಇಳಿಸುತ್ತಾರೆ. ಆ ಹತ್ತರಲ್ಲಿ ಯಾವುದು ಅತ್ಯಂತ ಸಾಮಾನ್ಯ ಕಾರಣವೋ ಅಂತಹ ಕಾರಣಕ್ಕೆ ಚಿಕಿತ್ಸೆ ನೀಡುತ್ತಾರೆ. ಗುಣವಾಗದಿದ್ದರೆ ಇನ್ನೊಂದು ಕಾರಣದ ಚಿಕಿತ್ಸೆ ನಡೆಯುತ್ತದೆ. ಪ್ರಾಥಮಿಕ ಹಂತದಲ್ಲಿ ಪ್ರಯೋಗಾಲಯದ ಪರೀಕ್ಷೆಗಳು ತೀರಾ ಕಡಿಮೆ. ಶೇಕಡಾ 80 ರಷ್ಟು ತಲೆನೋವುಗಳು ಈ ಹಂತದಲ್ಲೇ ಗುಣವಾಗುತ್ತವೆ. ಹಾಗೆ ಗುಣ ಆಗದಿದ್ದರೆ ಪ್ರಾಥಮಿಕ ಹಂತದಿಂದ ರೋಗಿ ದ್ವಿತೀಯ ಹಂತಕ್ಕೆ ಏರಬೇಕಾಗುತ್ತದೆ.

ದ್ವಿತೀಯ ಹಂತದ ವೈದ್ಯರ ವಿದ್ಯಾರ್ಹತೆ ಹೆಚ್ಚು ಇರುತ್ತದೆ. ಇಂತಹ ರೋಗಿಗಳನ್ನು ಪರೀಕ್ಷಿಸಿದ ಅನುಭವವೂ ಹೆಚ್ಚು ಇರುತ್ತದೆ. ಇದರ ಆಧಾರದ ಮೇಲೆ ಅವರು ಕೆಲವು ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡುತ್ತಾರೆ. ರೋಗಿಯ ತಲೆನೋವಿನ ಕಾರಣಗಳು ಈ ಹಂತದಲ್ಲಿ ಇಪ್ಪತ್ತರಿಂದ ಎರಡೋ-ಮೂರೋ ಸಂಖ್ಯೆಗೆ ಇಳಿದಿರುತ್ತವೆ. ನೂರಕ್ಕೆ ತೊಂಭತ್ತೆಂಟು ರೋಗಿಗಳು ಈ ಹಂತದಲ್ಲಿ ಗುಣಪಡುತ್ತಾರೆ.

ಈ ಸ್ತರದ ಚಿಕಿತ್ಸೆಗೂ ಗುಣವಾಗದ ಎರಡು-ಮೂರು ಪ್ರತಿಶತ ರೋಗಿಗಳು ಮೂರನೆಯ ಹಂತದ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಇಲ್ಲಿ ಆ ವಿಷಯದ ವಿಶೇಷ ತಜ್ಞರು ಇರುತ್ತಾರೆ. ಈ ಹಂತದ ಪ್ರಯೋಗಾಲಯದ ಪರೀಕ್ಷೆಗಳು ಕೂಡ ಅಧಿಕ ಮತ್ತು ದುಬಾರಿ. ತೀರಾ ಅಸಾಮಾನ್ಯ ಕಾಯಿಲೆಗಳಿಗೆ ಮಾತ್ರ ಇವನ್ನು ಬಳಸಬೇಕು. ಇದರ ಸ್ಪಷ್ಟ ಕಲ್ಪನೆ ಆ ತಜ್ಞ ವೈದ್ಯರಿಗೆ ಇರುತ್ತದೆ. ಇಷ್ಟಾಗಿಯೂ ನಾಲ್ಕೈದು ಸಾವಿರಕ್ಕೆ ಒಬ್ಬ ರೋಗಿಗೆ ತಲೆನೋವಿನ ಕಾರಣ ತಿಳಿಯದೆ ಹೋಗಬಹುದು. ವೈದ್ಯಕೀಯ ಸಂಶೋಧನೆ ನಡೆಯುವುದು ಇಂತಹ ಅಪರೂಪದ ರೋಗಿಗಳಲ್ಲಿಯೇ.
ಎಲ್ಲಾ ಮುಂದುವರೆದ ದೇಶಗಳಲ್ಲಿ ಇದೇ ಶ್ರೇಣಿ ವ್ಯವಸ್ಥೆ ಇದೆ. ತಲೆನೋವಿನ ಯಾವ ರೋಗಿಯೂ ಸೀದಾ ಮೂರನೇ ಹಂತದ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಮೊದಲ ಶ್ರೇಣಿಯಿಂದ ಎರಡನೇ ಶ್ರೇಣಿಗೆ, ಆನಂತರವೇ ಮೂರನೆಯ ಶ್ರೇಣಿಗೆ ಅಧಿಕೃತವಾಗಿ ವರ್ಗಾವಣೆ ಆಗಬೇಕು. ವ್ಯವಸ್ಥೆಯ ಶಿಸ್ತು ಹಾಗಿದೆ. ಈಗ ಕೆಳಹಂತದ ಪ್ರಾಥಮಿಕ ವೈದ್ಯರು ರೋಗಿಗೆ ಚಿಕಿತ್ಸೆ ನೀಡಿ, ತನ್ನ ಕೈಮೀರಿದ ರೋಗಿಯನ್ನು ಮೇಲಿನ ಹಂತಕ್ಕೆ ವರ್ಗಾಯಿಸಿದರೆ ಅದು ನ್ಯೂನತೆವಾಗಲೀ, ಅಲಕ್ಷ್ಯವಾಗಲೀ ಆಗುವುದಿಲ್ಲ. ಹೀಗೆ ಎರಡನೇ ಹಂತದಲ್ಲೂ ಸಹ. ಮೂರನೇ ಹಂತದ ತಜ್ಞರು ಇಂತಹ ರೋಗಿಗಳಿಗೆ ಸರಿಯಾಗಿ ಪರೀಕ್ಷಿಸದೇ ಇದ್ದರೆ ಮಾತ್ರ ಅದು ಅವಘಡ. ಒಂದು ವೇಳೆ ತನ್ನ ಬಳಿ ಸರಿಯಾಗಿ ಚಿಕಿತ್ಸೆಯಾಗದ ರೋಗಿಯನ್ನು ಮೇಲಿನ ವಿಶೇಷಜ್ಞರ ಬಳಿ ವರ್ಗಾಯಿಸದೆ ಇದ್ದರೆ ಅದು ಪ್ರಾಥಮಿಕ ವೈದ್ಯರ ಅಲಕ್ಷ್ಯ. ಎಷ್ಟು ರೋಗಿಗಳನ್ನು ಹೀಗೆ ಒಬ್ಬ ಪ್ರಾಥಮಿಕ ವೈದ್ಯ ಮೇಲಿನ ಸ್ತರಕ್ಕೆ ವರ್ಗಾಯಿಸಿದ್ದಾನೆ? ಹಾಗೆ ವರ್ಗಾಯಿಸಿದ ಪ್ರಕ್ರಿಯೆ ಸರಿಯೇ ತಪ್ಪೇ? ಇಂತಹ ಪರಿಮಾಣಗಳು ಮುಂದುವರೆದ ದೇಶಗಳಲ್ಲಿ ಇವೆ. ಇದರಿಂದ ಒಬ್ಬ ಪ್ರಾಥಮಿಕ ವೈದ್ಯನ ಗುಣಮಟ್ಟದ ನಿರ್ಧಾರ ಆಗುತ್ತದೆ. ತಜ್ಞರ ಅವಶ್ಯಕತೆ ಇರುವ ರೋಗಿಯನ್ನು ವರ್ಗಾಯಿಸದೆ ಇರುವುದೂ ತಪ್ಪು; ತಜ್ಞರ ಅವಶ್ಯಕತೆ ಇಲ್ಲದ ರೋಗಿಯನ್ನು ಅವರ ಬಳಿ ಕಳಿಸುವುದೂ ತಪ್ಪು. Act of ommission ಮತ್ತು act of commission ಎಂದು ಕರೆಯಲಾಗುವ ಈ ಪ್ರಕ್ರಿಯೆ ಮುಂದುವರೆದ ದೇಶಗಳಲ್ಲಿ ಚೆನ್ನಾಗಿ ರೂಪುಗೊಂಡಿದೆ.

ನಮ್ಮ ದೇಶದಲ್ಲಿ ಈ ರೀತಿಯ ವರ್ಗೀಕರಣ ಇಲ್ಲ. ನಮಗೆ ಶಿಸ್ತಿನ ಅಗತ್ಯವೇ ಇಲ್ಲ. ಎಲ್ಲಾ ಝಟ್-ಪಟ್ ವೇಗದಿಂದ ಆಗಬೇಕು. ವ್ಯವಸ್ಥೆಯಲ್ಲಿ ಬಿಗಿ ಇಲ್ಲ; ಅಧಿಕೃತ ವರ್ಗಾವಣೆ ಬೇಕಿಲ್ಲ; ರೋಗನಿದಾನದ ಪ್ರಕ್ರಿಯೆಯ ಹಂತಗಳ ಅರಿವಿಲ್ಲ. ಔಷಧ ತೆಗೆದುಕೊಂಡ ಹತ್ತು ನಿಮಿಷಗಳಲ್ಲಿ ಎಲ್ಲಾ ಸರಿಹೋಗದಿದ್ದರೆ ನಮಗೆ ಚಡಪಡಿಕೆ! ಮೊದಲೆನೆಯ ಭೇಟಿಗೆ ಸಮಸ್ಯೆ ಗುಣವಾಗದಿದ್ದರೆ ಆ ವೈದ್ಯನೇ ಅಸಮರ್ಥ; ಅವನ ಕೈಗುಣ ಸರಿಯಿಲ್ಲ! ಇದರ ಮೇಲೆ ಗೂಗಲ್ ಮಹಾಶಯನ ನೆರವು ಬೇರೆ! ತಲೆನೋವು ಎಂದಾಕ್ಷಣ ಏಕ್ದಂ ನರರೋಗ ತಜ್ಞರನ್ನು ಭೇಟಿ ಆಗಬಹುದು. ತಲೆನೋವಿನ ನೂರಾರು ಕಾರಣಗಳನ್ನೂ ಆ ತಜ್ಞರೇ ಪರಿಷ್ಕರಿಸಬೇಕು. ಸಮಯದ, ಒತ್ತಡದ ರೀತ್ಯಾ ಇದು ಬಹಳ ತ್ರಾಸದ ಕೆಲಸ. ಯಾವ ಕೆಲಸವನ್ನು ಮುಂದುವರೆದ ದೇಶಗಳಲ್ಲಿ ಮೂರು ವೈದ್ಯರು ಸಾಕಷ್ಟು ಸಮಯ ತೆಗೆದುಕೊಂಡು ಮಾಡುತ್ತಾರೋ, ಅದೇ ಕೆಲಸವನ್ನು ಇಲ್ಲಿ ಮೇಲಿನ ಸ್ತರದ ಒಬ್ಬ ತಜ್ಞ ಕೆಲವೇ ನಿಮಿಷಗಳಲ್ಲಿ ಮಾಡುವುದು ಅಸಮಂಜಸ. ನಮ್ಮ ದೇಶದ ರೋಗಿಗಳ ಸಂಖ್ಯಾಬಾಹುಳ್ಯ ಈ ಒತ್ತಡವನ್ನು ಅಧಿಕಗೊಳಿಸುತ್ತದೆ. ಅಲ್ಲದೇ, ಮೂರನೆಯ ಸ್ತರದ ತಜ್ಞ ವೈದ್ಯನ ಮಾತು ಅಂತಿಮ ಎನಿಸಿಕೊಳ್ಳುವುದರಿಂದ, ಆತ ಅವಕಾಶಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತನ್ನ ಬಳಿ ಬಂದ ಪ್ರತೀ ರೋಗಿಗೂ ಎಲ್ಲಾ ರೀತಿಯ ದುಬಾರಿ ಪರೀಕ್ಷೆಗಳನ್ನು ನಡೆಸಿ ತನ್ನ ತೀರ್ಪು ನೀಡಬೇಕಾಗುತ್ತದೆ. ಹೀಗಾಗಿ ಪ್ರಯೋಗಾಲಗಳಿಗೆ ಸುಗ್ಗಿ! ಇಂತಹ ಸಂದರ್ಭದಲ್ಲಿ ಅವರ ಮಧ್ಯೆ ಅನೈತಿಕ ಒಪ್ಪಂದಗಳೂ ಏರ್ಪಡುವುದು ಅಸಹಜವಲ್ಲ. ಇಂತಹ ಅಶಿಸ್ತಿನ ಪರಿಸರದಲ್ಲಿ ಅವಗಡಗಳು ಆಗುವುದು ಸರ್ವೇಸಾಮಾನ್ಯ.

ರೋಹಿತ್ ರವರು ಬರೆದಿರುವ ಇನ್ನೆರಡು ಸಂಖ್ಯೆಗಳೂ ಹೀಗೇ ಯಾವುದೋ ವರದಿಯ ಗುಣಾಕಾರದ ಆಧಾರದಿಂದಲೇ ಬಂದದ್ದು. ಜೊತೆಗೆ ಹಿಮ್ಮುಖವಾಗಿ (retrospective) ನಡೆಯುವ ಇಂತಹಾ ತನಿಖೆಗಳಲ್ಲಿ ಬಹಳ ಕಟ್ಟುನಿಟ್ಟು ಪಾಲಿಸಬೇಕು. ಉದಾಹರಣೆಗೆ: ಒಬ್ಬ ಕ್ಯಾನ್ಸರ್ ರೋಗಿ ಇದ್ದರೆನ್ನಿ. ನಾಲ್ಕು ವರ್ಷದ ಹಿಂದೆ ಅವರ ಮರಣ ಸಂಭವಿಸಿದೆ. ಈಗ ತನಿಖಾ ತಂಡ ಅವರ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ಈ ದಾಖಲೆಗಳಲ್ಲಿ ಯಾವುದಾದರೂ ವಿಷಯ ಅಸಮಗ್ರವಾಗಿ ದಾಖಲಾಗಿದ್ದಾರೆ ಅಥವಾ ಯಾವುದಾದರೂ ಅವಶ್ಯ ಮಾಹಿತಿಯನ್ನು ಯಾವ ಕಾರಣಕ್ಕಾದರೂ ದಾಖಲು ಮಾಡದೇ ಹೋದರೆ, ಆಗ ಆ ರೋಗಿಯ ಮರಣಕ್ಕೂ ವೈದ್ಯಕೀಯ ಅವಘಡವೇ ಕಾರಣ ಎಂದು ತೀರ್ಮಾನವಾಗುತ್ತದೆ. ಇಲ್ಲಿ ಕೊರತೆ ಇರುವುದು ವೈದ್ಯಕೀಯ ದಾಖಲೆಯ ನಿರ್ಮಾಣದಲ್ಲಿ. ರೋಗಿಯ ಚಿಕಿತ್ಸೆ ಸರಿಯಾಗಿಯೇ ಆಗಿರಬಹುದು. ಅವರ ಮರಣಕ್ಕೆ ವೈದ್ಯಕೀಯ ತಪ್ಪು ಯಾ ನಿರ್ಲಕ್ಷ್ಯ ಕಾರಣವಲ್ಲದೆ ಇರಬಹುದು. ಆದರೂ ತನಿಖೆಯ ಮಾನದಂಡಗಳ ಪ್ರಕಾರ ಅಸಮಗ್ರ ದಾಖಲೆ ಕೂಡಾ ವೈದ್ಯಕೀಯ ತಪ್ಪು ಯಾ ನಿರ್ಲಕ್ಷ್ಯದ ಅಡಿಯಲ್ಲೇ ಬರುತ್ತದೆ. ಈ ಮಾನದಂಡವನ್ನು ಸ್ಪರ್ಧಿಸುವಂತಿಲ್ಲ. ಇದಕ್ಕೆ ಯಾವುದೇ ಸಮಝಾಯಿಶಿಯೂ ಇಲ್ಲ.

ಒಟ್ಟಾರೆ ಕಡೆಗೆ ಬಂದ ಸಂಖ್ಯೆ ಸರಿಯೇ ತಪ್ಪೇ ಎಂಬ ಪ್ರಶ್ನೆ ಗೌಣ. ತಪ್ಪುಗಳು ಸಂಭವಿಸುತ್ತಿವೆ ಎಂಬುದು ಸತ್ಯ. ಅದನ್ನು ವೈದ್ಯಕೀಯ ರಂಗ ಒಪ್ಪಿಯಾಗಿದೆ. ಅಮೇರಿಕದಲ್ಲಂತೂ ಬಹಳ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ. ದಂತಕಥೆಯಾದ ವೈದ್ಯರ ಮೋಡಿ ಕೈಬರಹ ಈಗ ಅಲ್ಲಿನ ಆಸ್ಪತ್ರೆಗಳಲ್ಲಿ ಕಾಣಸಿಗದು. ಎಲ್ಲವೂ ಕಂಪ್ಯೂಟರ್ ಎಂಬ ಮಾಯಾವಿ ಗಣಕದ ಮೂಲಕ ಆಗುತ್ತವೆ. ಮುಂದುವರೆದ ದೇಶಗಳಲ್ಲಿ ವೈದ್ಯರು ಔಷಧ ಚೀಟಿ ಬರೆಯುವುದಿಲ್ಲ. ಕಂಪ್ಯೂಟರಿನಲ್ಲಿ ರೋಗಿಯ ವಿವರಗಳನ್ನು ತುಂಬುತ್ತಾರೆ. ಅದು ಔಷಧ ವಿತರಿಸುವ ಅಧಿಕೃತ ವ್ಯಕ್ತಿಯ ಗಣಕಕ್ಕೆ ಮಾತ್ರ ವರ್ಗಾವಣೆ ಆಗುತ್ತದೆ. ತಪ್ಪಿಯೂ ರೋಗಿಯ ಕೈಗೆ ನೇರವಾಗಿ ಸಿಗುವುದಿಲ್ಲ. ಒಂದು ವೇಳೆ ವೈದ್ಯರು ಔಷಧದ ಡೋಸ್ ತಪ್ಪಾಗಿ ಬರೆದರೆ ಮೊದಲು ಅವರ ಗಣಕ ಅದನ್ನು ಪ್ರಶ್ನಿಸುತ್ತದೆ. ಆಗಲೂ ತಪ್ಪಾಗಿಯೇ ಮುಂದುವರೆದರೆ, ಅದನ್ನು ಔಷಧ ನೀಡುವ ವ್ಯಕ್ತಿ ಪ್ರಶ್ನಿಸುತ್ತಾರೆ. ಕನಿಷ್ಠ ಎರಡು ಹಂತದಲ್ಲಿ ಡೋಸ್ ನಿರ್ಧಾರ ಆಗುವುದರಿಂದ ತಪ್ಪುಗಳು ಕಡಿಮೆಯಾಗಿವೆ. ಇದರ ಮೇಲೆ ಆಸ್ಪತ್ರೆಯ ಮಟ್ಟದಲ್ಲಿ ಆ ಔಷಧವನ್ನು ರೋಗಿಗೆ ನೀಡುವ ದಾದಿಯರೂ ಡೋಸ್ ಅನ್ನು ಪ್ರಶ್ನಿಸುವ ಅಧಿಕಾರ ಪಡೆದಿರುತ್ತಾರೆ. ಇದು ಮೂರನೇ ಸುರಕ್ಷಾ ಹಂತ. ಕಡೆಯ ಎರಡು ಹಂತಗಳಲ್ಲಿ ರೋಗಿಗೆ ವೈದ್ಯರು ನೀಡುತ್ತಿರುವ ಔಷಧದ ಔಚಿತ್ಯದ ಬಗ್ಗೆಯೂ ವೈದ್ಯರನ್ನು ಪ್ರಶ್ನಿಸಬಹುದು. ಇದರಿಂದ ತಪ್ಪು ಔಷಧ ಮತ್ತು ತಪ್ಪು ಡೋಸ್ ಗಳ ಹಾವಳಿ ತುಂಬಾ ತಗ್ಗಿದೆ.

ಭಾರತದ ಮಟ್ಟದಲ್ಲಿ ಹೇಳುವುದಾದರೆ ನಮ್ಮ ಪರಿಸ್ಥಿತಿ ಇಂದಿಗೂ ಹೀನಾಯವಾಗಿದೆ. ಈ ದುಸ್ಥಿತಿಯ ಮೂಲವನ್ನು ಹುಡುಕುತ್ತಾ ಹೋದರೆ ಅದು ನಮ್ಮ ಸರ್ಕಾರದ ನಿರ್ಲಕ್ಷ್ಯ, ವ್ಯವಸ್ಥೆಯ ಅಸಮರ್ಥತೆ, ಭ್ರಷ್ಟಾಚಾರ – ಇವನ್ನು ಗಿರಕಿ ಹೊಡೆಯುತ್ತವೆ. ಅಲ್ಲಿಗೆ ಚರ್ಚೆ ನಿಂತುಹೋಗುತ್ತದೆ. ರೋಹಿತ್ ರವರು ಹೇಳಿರುವ ವಾರ್ಷಿಕ ೫೨ ಲಕ್ಷ ಅವಘಡಗಳು ಯಾವುದೋ ಸಂದರ್ಶನದಲ್ಲಿ ಡಾ ಗಿರಿಧರ್ ಗ್ಯಾನಿ ಎಂಬ ಖಾಸಗಿ ವೈದ್ಯ ಹೇಳಿದ ಕಲ್ಪನೆಯ ಮಾತು. ಆ ವೈದ್ಯ ತನ್ನ ಮಾತಿಗೆ ಆಧಾರವಾಗಿ ನೀಡಿದ ಡಾ ಆಶೀಶ್ ಝಾ ಅವರ ೨೦೧೩ ರ ಬ್ರಿಟಿಶ್ ಮೆಡಿಕಲ್ ಜರ್ನಲ್ ನ ಮೂಲ ಲೇಖನದಲ್ಲಿ ಭಾರತದ ಪ್ರಸ್ತಾಪವೇ ಇಲ್ಲ! ಭಾರತದ ವಿಷಯವಾಗಿ ಯಾರಾದರೂ ಖಚಿತವಾಗಿ ಒಂದು ಸಂಖ್ಯೆಯನ್ನು ಹೇಳಿದರೆ, ಅದು ಸುಳ್ಳು ಆಗಿರುವ ಸಂಭವವೇ ಹೆಚ್ಚು! ನಮ್ಮಲ್ಲಿ ಆ ಗುಣಮಟ್ಟದ ತನಿಖೆ ಆಗುವ ಸಾಧ್ಯತೆಯೇ ಇಲ್ಲ! ಹಾಗೆಂದ ಮಾತ್ರಕ್ಕೆ ಅವಘಡಗಳೇನೂ ಆಗದೆ ಇಲ್ಲ! 

ಒಂದು ಬಾರಿ ಭಾರತದ ಪ್ರಸ್ತಾಪ ಬಂದ ಮೇಲೆ ರೋಹಿತ್ ರವರು ಏನು ಹೇಳಬಯಸಿದ್ದಾರೆ ಎಂಬುದು ಅಯೋಮಯವಾಗಿದೆ. ಭಾರತದ ವೈದ್ಯಕೀಯ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ನಾವು ಪದೇಪದೇ ಹೇಳಬೇಕಿಲ್ಲ. ಹೇಳಿ ಪ್ರಯೋಜನವೂ ಇಲ್ಲ. ಸರ್ಕಾರದಂತಹ ಬಲಶಾಲಿ ವ್ಯವಸ್ಥೆ ಮಾತ್ರ ಇದನ್ನು ಸುಧಾರಿಸಬಲ್ಲದು. ಆದರೆ ಸರ್ಕಾರ ಅದನ್ನು ಮಾಡುವುದಿಲ್ಲ. ಒಂದೆಡೆ ಸರ್ಕಾರ ದೇಶದ ಪ್ರಜೆಗಳ ಆರೋಗ್ಯ ರಕ್ಷಣೆಗೆ ಸರಿಯಾದ ಪ್ರಮಾಣದ ಹಣ ನೀಡುವುದಿಲ್ಲ; ಕೊಟ್ಟ ಹಣ ಸದ್ವಿನಿಯೋಗ ಆಗುತ್ತಿದೆಯೇ ಎಂಬ ನಿಗಾ ಇಲ್ಲ. ಸರ್ಕಾರದ ಆಯಕಟ್ಟಿನ ಸ್ಥಾನಗಳಲ್ಲಿ ಅರ್ಹರಿಗಿಂತ ಪ್ರಭಾವೀ ವ್ಯಕ್ತಿಗಳೇ ಅಧಿಕ. ಒಂದು ಸಣ್ಣ ಸರಕಾರೀ ಆಸ್ಪತ್ರೆಯ ಅಧೀಕ್ಷಕರ ನೇಮಕಕ್ಕೂ ರಾಜಕಾರಣದ ಪ್ರಭಾವ ಬಹಳ ಸಾಮಾನ್ಯ. ಬೇರುಗಳೇ ಕೊಳೆತಿರುವಾಗ ಪುಷ್ಟಿಯಾದ ಹಣ್ಣುಗಳನ್ನು ಅಪೇಕ್ಷಿಸುವ ನಮ್ಮ ಬುದ್ಧಿಗೆ ಏನೆನ್ನಬೇಕು?
ಇನ್ನು ಖಾಸಗೀ ಆಸ್ಪತ್ರೆಗಳ ವಿಷಯ. ಇಲ್ಲೂ ಸರ್ಕಾರದ ನೀತಿ ಸ್ಪಷ್ಟವಿಲ್ಲ. ಸರಕಾರೀ ಆಸ್ಪತ್ರೆಗಳ ಅವ್ಯವಸ್ಥೆಯಿಂದ ಲಂಗು-ಲಗಾಮಿಲ್ಲದೆ ಬೆಳೆದ ಖಾಸಗೀ ಆಸ್ಪತ್ರೆಗಳ ಬಗ್ಗೆ ಸರ್ಕಾರ ಒಂದು ನೀತಿಯನ್ನು ರೂಪಿಸಿದ್ದೇ ಬಹಳ ತಡವಾಗಿ. ಆ ನೀತಿಯನ್ನು ಅಮಲು ಮಾಡುವ ಆಲೋಚನೆಯೇ ಇಲ್ಲದಂತೆ ನಡೆದುಕೊಂಡಿದ್ದು ಖಾಸಗಿಯವರನ್ನು ಇನ್ನಷ್ಟು ಹುರಿದುಂಬಿಸಿತು. ಈಗಲೂ ಸರ್ಕಾರಕ್ಕೆ ಏನು ಮಾಡಬೇಕು ಎಂಬ ಸ್ಪಷ್ಟತೆ ಇಲ್ಲ. ಬಹಳಷ್ಟು ಖಾಸಗೀ ಆಸ್ಪತ್ರೆಗಳು ಪ್ರತ್ಯಕ್ಷ ಯಾ ಪರೋಕ್ಷವಾಗಿ ರಾಜಕಾರಣಿಗಳ ಹಿಡಿತದಲ್ಲೇ ಇವೆ. ಹೀಗಾಗಿ ಸರ್ಕಾರದ್ದು ಹಾವೂ ಸಾಯಬಾರದು – ಕೋಲೂ ಮುರಿಯಬಾರದು ಎಂಬ ನೀತಿ. ಈ ಯುದ್ಧದಲ್ಲಿ ಬಡಕಲಾಗುವುದು ಸ್ವಲ್ಪ ಸೇವಾ ಮನೋಭಾವ ಇರುವ ಸಣ್ಣಪುಟ್ಟ ಆಸ್ಪತ್ರೆಗಳು. ಇಂತಹವು ಮುಚ್ಚಿಹೋದರೆ ಹೊಡೆತ ತಿನ್ನುವುದು ಬಡ ರೋಗಿಗಳೇ.

ಅತ್ಯಂತ ಜರೂರಾಗಿ ನಮ್ಮ ಸರ್ಕಾರಕ್ಕೆ ಒಂದು ಆರೋಗ್ಯ ನೀತಿ ಬೇಕು. ಅಮೇರಿಕಾದಲ್ಲಿ ರೂಪಿಸುವ ನೀತಿಗಳ ಕಾಪಿ-ಪೇಸ್ಟ್ ಆಗುವ ಪರಿಸ್ಥಿತಿಯಲ್ಲಿ ನಮ್ಮ ದೇಶ ಇಲ್ಲ. ಅಲ್ಲಿ ಕುಣಿದಂತೆ ನಾವು ಇಲ್ಲಿ ಕುಣಿಯಲಾಗದು. ನಮಗೆ ನಮ್ಮದೇ ಆದ ಸಮಸ್ಯೆಗಳು, ವ್ಯಕ್ತಿವಿಶೇಷಗಳು, ವಿಚಿತ್ರ ಸಂದರ್ಭಗಳು, ತರಹೇವಾರಿ ರೋಗಿಗಳೂ, ಊಹಿಸಲೂ ಆಗದ ಪರಿಸ್ಥಿತಿಗಳೂ ಇದ್ದಾವೆ. ಖಾಸಗಿ ಆಸ್ಪತ್ರೆಗಳನ್ನು ಹಳಿಯುವುದು ಸುಲಭ. ಆದರೆ ಸದ್ಯಕ್ಕೆ ಅವುಗಳಿಗೆ ಪರ್ಯಾಯವೇನು? ಇಚ್ಚಾಶಕ್ತಿ ಇಲ್ಲದ ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ಕೊಂದು, ಸರಕಾರೀ ಆಸ್ಪತ್ರೆಗಳನ್ನು ಕಡೆಗಣಿಸಿದರೆ ಪ್ರಜೆಗಳು ಎಲ್ಲಿ ಹೋಗಬೇಕು? ಇದಕ್ಕೆ ನಮ್ಮದೇ ಆದ ನವನವೀನ ಪರಿಹಾರಗಳು ಬೇಕು. ಸರ್ಕಾರ ಎಲ್ಲಾ ಸರಕಾರೀ ಹಾಗೂ ಖಾಸಗೀ ಆರೋಗ್ಯ ಸಂಸ್ಥೆಗಳಿಗೆ ವರ್ಗೀಕೃತ ಶ್ರೇಣಿ ನೀಡಬೇಕು. ಅವುಗಳಲ್ಲಿ ಇರುವ ಅನುಕೂಲಕ್ಕೆ ತಕ್ಕಂತೆ ಅವುಗಳು ಮಾಡಬಹುದಾದ ಚಿಕಿತ್ಸೆಯನ್ನು ನಿಯಂತ್ರಿಸಬೇಕು. ಹೆರಿಗೆ ಮಾಡಿಸಲೂ ಸೌಕರ್ಯ ಇಲ್ಲದ ಆಸ್ಪತ್ರೆಯು ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಕೊಡಬಾರದು. ಇದಕ್ಕೆ ತಜ್ಞ ಸಮಿತಿ ಏರ್ಪಾಡಾಗಿ ಒಂದು ನಿಯಮಿತ ಕಾಲದಲ್ಲಿ ವರದಿ ನೀಡುವಂತೆ ಮಾಡಬೇಕು. ಆ ವರದಿಯನ್ನು ಸಾರ್ವಜನಿಕವಾಗಿ ವೈದ್ಯರ ಮುಂದಿಟ್ಟು ಪರಿಷ್ಕರಣೆ ಮಾಡಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕು. ಸರ್ಕಾರದಿಂದಲೇ ಆರೋಗ್ಯವಿಮೆಯನ್ನು ವಿಸ್ತರಿಸಬೇಕು. ಅದಕ್ಕೆ ಸ್ತರಗಳನ್ನು ನಿಗದಿ ಮಾಡಬೇಕು. ಆ ವಿಮಾ ಸೌಲಭ್ಯಕ್ಕೆ ಖಾಸಗಿ ಆಸ್ಪತ್ರೆಗಳನ್ನು ಸೇರಿಸಬೇಕು. ಆರೋಗ್ಯ ನಿರ್ವಹಣೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವಂತೆ ಸ್ವಾಯತ್ತ ಸಮಿತಿಗಳ ಏರ್ಪಾಡು ಆಗಬೇಕು.

ನಮ್ಮ ದೇಶದಲ್ಲಿ ಆಸ್ಪತ್ರೆ ಅವಘಡಗಳು ಇಲ್ಲದಿಲ್ಲ. ಆದರೆ ಇಡೀ ಆರೋಗ್ಯ ವ್ಯವಸ್ಥೆಯೇ ಹದಗೆಟ್ಟಿರುವಾಗ ಅದನ್ನು ಹಂತಹಂತವಾಗಿ ಸರಿಮಾಡುವ ಅಗತ್ಯ ಹೆಚ್ಚು. ರೋಹಿತ್ ರವರ ಲೇಖನದಲ್ಲಿ ಪ್ರಸ್ತಾಪ ಆಗಿರುವ ವಿಷಯಗಳು ಅಮುಖ್ಯ ಎಂದಲ್ಲ. ಆದರೆ ನಮಗೆ ಅದರ ಆದ್ಯತೆ ಇನ್ನೂ ದೂರವಿದೆ. ಅಮೇರಿಕ ದೇಶದ ಗುಣಮಟ್ಟ ಹೊಂದಿರುವ ಖಾಸಗೀ ಆಸ್ಪತ್ರೆಗಳೂ ನಮ್ಮಲ್ಲಿವೆ. ಅಂತಹವಕ್ಕೆ ಈ ಆದ್ಯತೆಗಳು ಇಂದೇ ಅಗತ್ಯ. ಆದರೆ ಜ್ವರದ ಔಷಧಿಯೇ ಅಲಭ್ಯವಾಗಿರುವ ಸರಕಾರಿ ಆಸ್ಪತ್ರೆಗಳಲ್ಲಿ ಆ ಔಷಧಿಯ ಕಾಗುಣಿತವನ್ನು ವೈದ್ಯರು ಸ್ಪಷ್ಟವಾಗಿ ಬರೆಯಲಿಲ್ಲ ಎಂದು ಹಂಗಿಸಿದರೆ ಏನೆನ್ನಬೇಕು?
ಕಡೆಯದಾಗಿ ಒಂದು ಮಾತು. ವ್ಯವಸ್ಥೆ ಎಷ್ಟೇ ಹದಗೆಟ್ಟಿದ್ದರೂ ಈ ದೇಶದಲ್ಲಿ ಪ್ರಜೆಗಳ ಆಯುರ್ಮಾನ ಹೆಚ್ಚುತ್ತಾ ಇರುವುದರಲ್ಲಿ ವೈದ್ಯರ, ಆಸ್ಪತ್ರೆಗಳ ಪಾತ್ರ ಬಹಳವೇ ಇದೆ. ನಮ್ಮ ದೇಶದ ಅತ್ಯಂತ ಸುಸಜ್ಜಿತ ಆಸ್ಪತ್ರೆಗಳಲ್ಲಿ ಕ್ಲಿಷ್ಟಕರ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ತಗಲುವ ವೆಚ್ಚ ಅಮೇರಿಕಾ ದೇಶದಲ್ಲಿ ಅದೇ ಸಮಸ್ಯೆಯ ಚಿಕಿತ್ಸೆಗೆ ಹೋಲಿಸಿದರೆ ನಗಣ್ಯ! ಇದರಲ್ಲಿ ವೈದ್ಯರಿಗೆ ದೊರೆಯುವ ಹಣದ ಪಾಲು ತೀರಾ ಚಿಕ್ಕಾಸು! ಈ ವಿಷಯವಾಗಿ ಡಾ ಸೌಮ್ಯ ರಾವ್ ಎಂಬ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತೆ A Tale of Two Countries ಎಂಬ ಶೀರ್ಷಿಕೆಯಲ್ಲಿ ೨೦೧೪ ರಲ್ಲಿ ಬರೆದಿದ್ದ ಲೇಖನ ಅಂತರ್ಜಾಲದಲ್ಲಿ ಲಭ್ಯವಿದೆ. ಆಸಕ್ತರು ನೋಡಬಹುದು. 

ನಮ್ಮಲ್ಲಿ ತಪ್ಪುಗಳಿಗೆ ಬರವಿಲ್ಲ. ಆದರೆ ಎಲ್ಲದಕ್ಕೂ ನಾವು ವೈದ್ಯರತ್ತ, ಆಸ್ಪತ್ರೆಗಳತ್ತ ಕಲ್ಲು ಬೀರುತ್ತಾ, ಹಳಿಯುತ್ತಾ, ದೂಷಿಸುತ್ತಾ ಹೋದರೆ ಕಡೆಗೆ ನಷ್ಟ ನಮಗೇ! ನಂಬಿಕೆಯೇ ಮುಖ್ಯ. ರೋಗ ಬಂದಾಗ ಮನೆಯಲ್ಲೇ ಇದ್ದು ಸಾಯುವುದೋ ಅಥವಾ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದೋ ಎಂಬ ಆಯ್ಕೆ ವೈಯುಕ್ತಿಕ. ಆದರೆ ಈ ನಿರ್ಧಾರದ ಬುನಾದಿ ವೈದ್ಯರಂಗದ ವಿರುದ್ಧ ನಾವು ಹೊತ್ತಿರುವ ಪೂರ್ವಗ್ರಹಗಳು, ಅಪನಂಬಿಕೆಗಳು ಮಾತ್ರ ಆಗಬಾರದು. ವಿಶ್ವಾಸವಿದ್ದರೆ ಗೆದ್ದೇವು. ಇನ್ನು ಅವರವರ ಇಚ್ಛೆ. ಹೂವಿನ ಗುಚ್ಚಕ್ಕೆ ಹಣ ನೀಡಬೇಕು; ಕಲ್ಲುಗಳು ಎಲ್ಲಾ ಬೀದಿ ಬದಿಯಲ್ಲೂ ಉಚಿತವಾಗಿ ಲಭ್ಯ. ವೈದ್ಯರಂಗಕ್ಕೆ ಜನಸಾಮಾನ್ಯರು ಏನು ನೀಡಬೇಕೆಂಬ ಆಯ್ಕೆಗಳೂ ಹಾಗೆಯೇ!
----------------

ಶನಿವಾರ, ಡಿಸೆಂಬರ್ 9, 2017



“ವೈದ್ಯರ ಮೇಲೆ” “ಹಲ್ಲೆಗಳು” “ಏಕೆ” ಆಗುತ್ತಿವೆ?
ಒಗಟಿನಂತೆ ಕಾಣುವ ಈ ಶೀರ್ಷಿಕೆಯಲ್ಲಿ ಮೂರು ಭಾಗಗಳಿವೆ. ಅದನ್ನು ವಿವರಿಸಲೆಂದೇ ಈ ಪ್ರಯತ್ನ.

ನಾಡಿನಾದ್ಯಂತ ವೈದ್ಯರ ಮೇಲೆ ಹಲ್ಲೆಗಳು ಜರುಗುತ್ತಿವೆ. ಒಂದು ನಾಗರೀಕ ಸಮಾಜದಲ್ಲಿ ಇದಕ್ಕಿಂತ ಖಂಡನೀಯ ಕೃತ್ಯ ಮತ್ತೊಂದು ಇರಲಾರದು. ರಾಜಕಾರಣಿಗಳು, ಹಲ್ಲೆಕೋರರು ಎಷ್ಟೇ ಸಮರ್ಥಿಸಿಕೊಂಡರೂ ಈ ರೀತಿಯ ಕೃತ್ಯಗಳು ಸರ್ವಥಾ ಸಾಧುವಲ್ಲ. ಇಂತಹ ಹೇಯಗಳನ್ನು ಕೇವಲ ಖಂಡಿಸಿ ಪ್ರಯೋಜನವಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುವುದರಿಂದ ಪರಿಸ್ಥಿತಿ ಉತ್ತಮಗೊಳಿಸಲು ಸಾಧ್ಯ. ಅದಕ್ಕೇ ಮೂಲ ಪ್ರಶ್ನೆಯನ್ನು ಮೂರು ಭಾಗಗಳಾಗಿ ಶೀರ್ಷಿಕೆಯಲ್ಲಿ ವಿಂಗಡಿಸಿದೆ.

“ಹಲ್ಲೆಗಳು” ಈಗ ಮಾತ್ರ ಆಗುತ್ತಿವೆಯೇ? ಇಲ್ಲ! ಈ ಮೊದಲೂ ವೈದ್ಯರ ಮೇಲೆ ಹಲ್ಲೆಗಳು ಜರುಗಿದ್ದುಂಟು. ಆದರೆ ಆಗ ಅವು ತೀರಾ ಅಪರೂಪದ ಸಂಗತಿಗಳಾಗಿದ್ದವು. ವೈಯುಕ್ತಿಕ ಕಾರಣಗಳಿಂದಲೂ ಹೀಗೆ ಆಗುತ್ತಿದ್ದವು. ಆದರೆ ಈಗ ಹಾಗಲ್ಲ. ಪ್ರಸ್ತುತ ಆಸ್ಪತ್ರೆಯಲ್ಲಿ ದಾಖಲಾದ ರೋಗಿ ಮರಣ ಹೊಂದಿದರೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತದೆ! ಸರಿ-ತಪ್ಪುಗಳ ಜಿಜ್ಞಾಸೆಯೇ ಇಲ್ಲ; ಹೊಡಿ-ಬಡಿ ಸಂಪ್ರದಾಯ! ಇದಕ್ಕೆ ರಾಜಕಾರಣದ ಕುಮ್ಮಕ್ಕು ಬೇರೆ!

“ಹಲ್ಲೆಗಳಿಗೆ” ಕಾರಣ ಇದ್ದರೂ ವೈದ್ಯರ ಮೇಲೆ ಏಕೆ?

ಏಕೆ ಎಂಬುದು ಕಷ್ಟದ ಪ್ರಶ್ನೆ. ಇದಕ್ಕೆ ಸ್ವಲ್ಪ ಹಿನ್ನೆಲೆ ಅಗತ್ಯ.

ದಶಕಗಳ ಹಿಂದೆ ಯಾರಾದರೂ ಆಸ್ಪತ್ರೆಗಳಲ್ಲಿ ಓಡಾಡುತ್ತಿದ್ದರೆ ಅವರಿಗೆ ಆಸ್ಪತ್ರೆಯ ಮುಖ್ಯ ಸ್ಥಾನಗಳಲ್ಲಿ ವೈದ್ಯರೇ ಕಾಣುತ್ತಿದ್ದರು. ಆಸ್ಪತ್ರೆಯ ನಿರ್ದೇಶಕ, ಸಂಚಾಲಕ, ಅಧೀಕ್ಷಕ, ಇತ್ಯಾದಿ ಸ್ಥಾನಗಳಲ್ಲಿ ಇದ್ದವರು ವೈದ್ಯರೇ. ವೈದ್ಯಕೀಯ ವೆಚ್ಚ ಬಹಳ ಕಡಿಮೆ ಇತ್ತು. ರೋಗಿಯ ಚಿಕಿತ್ಸೆಗೆ ಎಂದು ಕಟ್ಟಿದ ಆ ಅಲ್ಪ ಮೊತ್ತದ ಬಹುಪಾಲು ವೈದ್ಯರಿಗೆ ಸೇರುತ್ತಿತ್ತು. ಆಗ ವೈದ್ಯರ ಸ್ಥಾನಮಾನ ಘನವಾಗಿತ್ತು. ಯಾವುದಾದರೂ ರೋಗಿಗೆ ವೈದ್ಯರು ಉಚಿತ ಚಿಕಿತ್ಸೆಯೂ, ರಿಯಾಯಿತಿಯೋ ನೀಡಬೇಕು ಎಂದಿದ್ದರೆ ಒಂದು ಷರಾ ಬರೆದು ಸಹಿ ಹಾಕಿದ್ದರೆ ಸಾಕಾಗುತ್ತಿತ್ತು. ರೋಗಿಗಳ ಪಾಲಿಗೆ ವೈದ್ಯರು ಸರ್ವಶಕ್ತರಾಗಿದ್ದರು. ಆ ಸ್ಥಾಯೀ ಭಾವ ಎಲ್ಲರ ಮನಸ್ಸಿನಲ್ಲಿ ಬೇರೂರಿತ್ತು.

ಈಗಿನ ದಿನಗಳಲ್ಲಿ ಇರುವುದು ಆಸ್ಪತ್ರೆಯಲ್ಲ; ಅದು ಆರೋಗ್ಯ ಸಂಕೀರ್ಣ! ಸ್ವಾಸ್ಥ್ಯ ಸಮುಚ್ಚಯ! ಬಹುಮಹಡಿ ಕಟ್ಟಡಗಳು; ಆಕರ್ಷಕ ಒಳಾಂಗಣ; ದುಬಾರಿ ಕಲಾಕೃತಿಗಳು; ಪ್ರಭಾವೀ ಜಾಹೀರಾತುಗಳು; ಪರೀಕ್ಷೆಗಳ ಮೇಲೆ ರಿಯಾಯತಿ ಕೂಪನ್ ಗಳು; ಬೃಹತ್ ಗಾತ್ರದ ಉಪಕರಣಗಳು; ಐಶಾರಾಮಿ ವಾರ್ಡುಗಳು – ಹೀಗೆ ಹತ್ತು ಹಲವಾರು. 

ಇಂತಹ ದೊಡ್ಡ ದೊಡ್ಡ ಆರೋಗ್ಯ ಸಂಕೀರ್ಣಗಳನ್ನು ನಿಭಾಯಿಸುವುದು ಬಡಪಾಯಿ ವೈದ್ಯರಿಗೆ ಸಾಧ್ಯವಿಲ್ಲ ಎಂದು ಈ ಜಾಗಗಳಿಗೆ ಹಣ ಹಾಕಿರುವ ಉದ್ಯಮಪತಿಗಳ ನಿಲುವು. ಆದ್ದರಿಂದ ಇಂತಹ ಬೃಹತ್ ಸಮುಚ್ಚಯಗಳನ್ನು ನಡೆಸುವವರು MBA ಡಿಗ್ರಿ ಹೊಂದಿರುವ ವ್ಯವಹಾರ ಆಡಳಿತಗಾರರು. ಆಸ್ಪತ್ರೆ ಎನ್ನುವುದು ಹೇಗೆ ಕೆಲಸ ಮಾಡುತ್ತದೆ ಎಂಬುದಿರಲಿ, ಈ ಆಡಳಿತಗಾರರಿಗೆ ಆಸ್ಪತ್ರೆ ಹೇಗೆ ಇರುತ್ತದೆ ಎಂಬುದೂ ತಿಳಿದಿರಬೇಕಿಲ್ಲ! ಇಂತಹವರು ತಮ್ಮ ಕೋಣೆಯ ಸುಪ್ಪತಿಗೆಯ ಮೇಲೆ ಕೂತು ತಮ್ಮ ವೈಯುಕ್ತಿಕ ಗಣಕ ಯಂತ್ರದಲ್ಲಿ ಆಸ್ಪತ್ರೆಯ ಖರ್ಚು-ವೆಚ್ಚದ ದಾಖಲೆ ನೋಡುತ್ತಾ, ಬೇರೆ ಉದ್ಯಮಗಳಲ್ಲಿ ಬಳಸುವ ಪರಿಮಾಣಗಳನ್ನು ಆಸ್ಪತ್ರೆಯ ನಿರ್ವಹಣೆಯಲ್ಲೂ ಬಳಸುತ್ತಾ, ಯಾವ ವೈದ್ಯ ಆಸ್ಪತ್ರೆಗೆ ಎಷ್ಟು ಲಾಭ ತಂದಿದ್ದಾನೆ ಎಂದು ಗಮನಿಸುತ್ತಾ, ಯಾವ ಖರ್ಚಿಗೆ ಕಡಿವಾಣ ಹಾಕಿದರೆ ಲಾಭ ಎಷ್ಟು ಎಂದು ಚರ್ಚಿಸುತ್ತಾ ಸಾಗಬಹುದು. ಆಸ್ಪತ್ರೆ ಎಂಬುದು ಕೇವಲ ಹಣ ಬೆಳೆಯುವ ಗಿಡವಲ್ಲ; ಅದು ಚಿಕಿತ್ಸೆ ನೀಡುವ, ಜೀವ ಉಳಿಸುವ, ನೊಂದವರನ್ನು ಸಾಂತ್ವನಗೊಳಿಸುವ ಸ್ಥಳ ಎಂಬ ಮಾತು ಇಂತಹ ವೈದ್ಯರಲ್ಲದ ಆಡಳಿತಗಾರರಿಗೆ ಅಪಥ್ಯ. ಇವರಿಗೆ ಉತ್ತಮ ಚಿಕಿತ್ಸಕರ ತಂಡ ಬೇಕಿಲ್ಲ. ಆಸ್ಪತ್ರೆಗೆ ಸಾಕಷ್ಟು ಕಾಸು ತಾರದ ವೈದ್ಯರನ್ನು ಓಡಿಸುವ ತಂತ್ರಗಾರಿಕೆ ಬೇಕು!

ಹೀಗೆ ಆಸ್ಪತ್ರೆಯ ಆಡಳಿತದ ಶಕ್ತಿ ಕೇಂದ್ರ ವೈದ್ಯರ ಕೈಯಿಂದ ದಾಟಿ ಆಡಳಿತಕಾರ ಕಪಿಮುಷ್ಟಿಗೆ ಎಂದೋ ವರ್ಗವಾಗಿಹೋಗಿದೆ. ಆದರೆ ರೋಗಿಗಳ ಪಾಲಿಗೆ ಈ ಸತ್ಯದ ದರ್ಶನ ಇನ್ನೂ ಆಗಿಲ್ಲ. ಏಕೆಂದರೆ ತಂತಮ್ಮ ಕಾರ್ಪೊರೇಟ್ ಕೋಣೆಗಳಲ್ಲಿ ಕೂತ ಈ ಸರ್ವಶಕ್ತ ಆಡಳಿತಕಾರರು ರೋಗಿಗಳ ಕಣ್ಣಿಗೆ ಕಾಣುವುದೇ ಇಲ್ಲ! ರೋಗಿಗಳ, ಅವರ ಕುಟುಂಬವರ್ಗದವರ ಕಣ್ಣಿಗೆ ಕಾಣುವುದು ಚಿಕಿತ್ಸೆ ನೀಡುವ ವೈದ್ಯರು ಮಾತ್ರ. ತಮ್ಮ ಕಣ್ಣಿಗೆ ಕಂಡದ್ದೇ ಸತ್ಯ ಎಂದು ಭಾವಿಸುವ ರೋಗಿಗಳ ಪರಿವಾರಗಳಿಗೆ ಈ ದಿನಕ್ಕೂ ವೈದ್ಯರೇ ಆಸ್ಪತ್ರೆಯನ್ನು ನಡೆಸುವ, ಅದರ ಲಾಭವನ್ನು ಕಬಳಿಸುವ ಮೂಲಧಾತು!

ಸಮಸ್ಯೆ ಉದ್ಭವಿಸುವುದು ಇಲ್ಲೇ! ರೋಗಿಯ ಪರಿವಾರಕ್ಕೆ ವಸ್ತುಸ್ಥಿತಿ ತಿಳಿದಿಲ್ಲ. ರೋಗಿಯ ಚಿಕಿತ್ಸೆಗೆ ಆಗುವ ಖರ್ಚಿನ ಬಹುಪಾಲು ವೈದ್ಯರಿಗೆ ಸೇರುತ್ತಿಲ್ಲ ಎಂಬುದು ಅವರಿಗೆ ತಿಳಿದಿಲ್ಲ! ಚಿಕಿತ್ಸೆಯ ವೆಚ್ಚದಲ್ಲಿ ರಿಯಾಯತಿ ನೀಡುವ ಸಾಮರ್ಥ್ಯ ಈಗ ವೈದ್ಯರಿಗೆ ಇಲ್ಲ ಎಂದು ಅವರಿಗೆ ಗೊತ್ತಿಲ್ಲ; ಚಿಕಿತ್ಸೆ ಬರೆಯುವುದನ್ನು, ಶಸ್ತ್ರಚಿಕಿತ್ಸೆ ಮಾಡುವುದನ್ನು ಬಿಟ್ಟರೆ ಉಳಿದ ಯಾವ ಪ್ರಕ್ರಿಯೆಯೂ ವೈದ್ಯರ ನಿಲುವಿನಲ್ಲಿ ಇಲ್ಲ ಎಂಬುದು ಅವರಿಗೆ ಅರಿವಿಲ್ಲ; ರೋಗಿಗೆ ಯಾವ ಔಷಧ ಸಂಸ್ಥೆಯ ಮದ್ದುಗಳನ್ನು ಉಪಯೋಗಿಸಬೇಕು ಎಂಬ ನಿರ್ಧಾರ ಕೂಡ ತನದಲ್ಲ, ಅದು ಆಡಳಿತ ಮಂಡಲಿಯದ್ದು ಎಂಬ ಸತ್ಯ ಅವರಿಗೆ ಯಾವ ವೈದ್ಯ ತಾನೇ ಹೇಳಿಯಾನು?

ಯಾವ ದಿನದಂದು MBA ಹಿನ್ನೆಲೆಯ ಆಡಳಿತಕಾರ ಆಸ್ಪತ್ರೆಯ ಅಧಿಕಾರ ವಹಿಸಿದನೋ, ಅಂದೇ ಆಸ್ಪತ್ರೆ ಚಿಕಿತ್ಸಾತಾಣದಿಂದ ಬದಲಾಗಿ ವ್ಯಾವಹಾರಿಕ ಕಸುಬು ಆಯಿತು. ವ್ಯಾಪಾರೀ ನಿಯಮಗಳು ಅಲ್ಲಿ ಸ್ಥಾಪಿತವಾದವು. ಈ ಸ್ಥಿತ್ಯಂತರ ವೈದ್ಯರಿಗೆ ಗೊತ್ತು. ಆದರೆ ರೋಗಿಗಳ ಪರಿವಾರಕ್ಕೆ ಗೊತ್ತಿಲ್ಲ. ಅವರ ಪ್ರಕಾರ ವೈದ್ಯರು ದುರಾಸೆಕೋರರು; ಚಿಕಿತ್ಸಾವೆಚ್ಚವನ್ನು ಏರಿಸಿ ತಮ್ಮ ಜೇಬು ತುಂಬಿಕೊಳ್ಳುವ ದುರಾತ್ಮರು;  ಅವರ ಅತೀ ಆಸೆಯಿಂದಲೇ ಚಿಕಿತ್ಸೆಯ ವೆಚ್ಚ ಆಕಾಶಕ್ಕೆ ಏರಿದೆ; ನಮ್ಮ ದುಡಿಮೆಯಿಂದ ಅವರಿಗೆ ನಾವೇಕೆ ಸಿರಿವಂತಿಕೆ ನೀಡಬೇಕು? ಮಾಡಿದ ಖರ್ಚಿಗೆ ಪ್ರತಿಫಲ ಬೇಡವೇ?

ಈ ಪ್ರತಿಫಲದ ಪ್ರಶ್ನೆಯೇ ಒಗಟು! ಆಸ್ಪತ್ರೆ ಎಂದರೆ ವ್ಯಾಪಾರ ಎಂದು ಭಾವಿಸಿರುವ ಆಡಳಿತ ಮಂಡಳಿಗೆ ಪ್ರತಿಫಲ ಎಂಬ ಮಾತಿನ ಅರ್ಥಕ್ಕೆ “ಬೇರೆ ಜಾಗದಲ್ಲಿ ಇಷ್ಟು ಹಣ ತೊಡಗಿಸಿದ್ದಾರೆ ಲಾಭ ಎಷ್ಟು ಬರುತ್ತಿತ್ತು?” ಎಂಬ ಪ್ರಶ್ನೆಯೇ ಆಧಾರ. ಆಸ್ಪತ್ರೆಗಳ ನಿರ್ವಹಣೆಯಲ್ಲಿ ಖರ್ಚು ಜಾಸ್ತಿ. ಹೂಡಿಕೆದಾರನಿಗೆ ಲಾಭ ಕಡಿಮೆ ಎಂದರೆ, ಹಣ ನೀಡುವವರು ತಾವು ನೀಡಿದ ಪ್ರತೀ ರೂಪಾಯಿಗೇ ಅಧಿಕ ಮೌಲ್ಯ ಪಡೆಯುತ್ತಿದ್ದಾರೆ ಎಂದೇ ಅರ್ಥವಲ್ಲವೇ? ಅಂದರೆ ರೋಗಿಯ ಪರಿವಾರ ಕಡಿಮೆ ಕಾಸು ಕೊಟ್ಟು ಅಧಿಕ ಮೌಲ್ಯ ಪಡೆಯುತ್ತಿದೆ ಎಂದು ಆಡಳಿತಕಾರರ ನಂಬಿಕೆ.

ರೋಗಿಯ ಪರಿವಾರಕ್ಕೆ ಈ ಪ್ರತಿಫಲ ಪದದ ಅರ್ಥವೇನು? ರೋಗಿ ಬದುಕಬೇಕು ಎಂಬ ಒಂದೇ ಆಕಾಂಕ್ಷೆಯಿಂದ ಆಸ್ಪತ್ರೆಗೆ ದಾಖಲಾಗುವ ಅವರು, ಖರ್ಚು ಎಷ್ಟೇ ಆದರೂ ಸರಿ, ರೋಗಿಯ ಪ್ರಾಣ ಉಳಿಯಲಿ ಎಂಬ ಪ್ರತಿಫಲದಿಂದ ಕೇಳಿದಷ್ಟು ಹಣ ಕಟ್ಟುತ್ತಾರೆ. ಅಂದರೆ ಪ್ರತಿಫಲ ಎಂಬುದು ಅವರ ಮನಸ್ಸಿನಲ್ಲಿ ಹಣ ಮತ್ತು ಪ್ರಾಣಗಳ ಸಮೀಕರಣ. ಸಾಕಷ್ಟು ಹಣವೂ ಹೋಯಿತು, ಪ್ರಾಣವೂ ಉಳಿಯಲಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗುವ ಅಂಶವಾಗುತ್ತದೆ. ಕೇವಲ ಹಣವೊಂದೇ ಪ್ರಾಣವನ್ನು ಉಳಿಸಲಾರದಷ್ಟೇ? ಈ ರೀತಿಯ ವ್ಯವಹಾರವೇ ಅರ್ಥಹೀನ ಎಂಬುದು ಆ ಘಳಿಗೆಯಲ್ಲಿ ಅವರಿಗೆ ಅರ್ಥಮಾಡಿಕೊಳ್ಳುವುದು ಕಠಿಣ. ಅವರ ಕಷ್ಟಾರ್ಜಿತ ಹಣವು ರೋಗಿಯ ಪ್ರಾಣವನ್ನು ಉಳಿಸದೇ ಹೋದಾಗ ಅದು ಕ್ರೋಧಕ್ಕೆ ತಿರುಗುತ್ತದೆ; ದುರ್ಬಲ ಮನಸ್ಸಿನವರಿಗೆ ಆ ಕ್ರೋಧ ಹಲ್ಲೆ ನಡೆಸಲು ಕಾರಣವಾಗುತ್ತದೆ.

ಹಲ್ಲೆಗಳು ಏಕೆ ಆಗುತ್ತಿವೆ? ಎಂಬ ಪ್ರಶ್ನೆಗೆ ಸರಿಸುಮಾರು ಉತ್ತರ ದೊರಕಿದರೂ, ವೈದ್ಯರ ಮೇಲೆ ಏಕೆ? ಎಂಬುದನ್ನು ನೋಡಬೇಕು.

ಪ್ರತಿಫಲ ಕಡಿಮೆ ಎಂದು ಕೊರಗುವ ಆಡಳಿತ ಮಂಡಳಿ ಮತ್ತು ಪ್ರತಿಫಲ ದೊರಕಲಿಲ್ಲ ಎಂದು ಕ್ರೋಧಗೊಂಡ ರೋಗಿಯ ಪರಿವಾರದ ಮಧ್ಯೆ ಸೇತುವೆಯಾಗಿ ಇಬ್ಬದಿಯಿಂದಲೂ ಹೊಡೆತ ತಿನ್ನುವವರು ಬಡಪಾಯಿ ವೈದ್ಯರು. ಆಸ್ಪತ್ರೆಯ ಲಾಭಾಂಶವನ್ನು ವೃದ್ಧಿಸಬೇಕು ಎಂದು ಆಡಳಿತ ಮಂಡಳಿ ನಿರ್ಧರಿಸಿದರೆ ಅದನ್ನು ನೆರವೇರಿಸುವ ಜವಾಬ್ದಾರಿ ವೈದ್ಯರದ್ದು. ಹೇಗೆ ಮಾಡಬಹುದು? ಎಂಬ ವೈದ್ಯರ ಪ್ರಶ್ನೆಗೆ ಆಡಳಿತ ಮಂಡಳಿಯಿಂದ ಸರಿಯಾದ ಉತ್ತರವಿಲ್ಲ! ಲಾಭಾಂಶ ವೃದ್ಧಿಸದ ವೈದ್ಯರನ್ನು ಆಸ್ಪತ್ರೆ ಕೆಲಸದಿಂದ ಎತ್ತಂಗಡಿ ಮಾಡಲೂಬಹುದು. ಈ ಅಭದ್ರತೆ ಹಲವಾರು ವೈದ್ಯರನ್ನು ತಪ್ಪು ದಾರಿಗೆ ಎಳೆಯುವುದು ಸಹಜ. ವಿದ್ಯಾಭ್ಯಾಸಕ್ಕೆ ಸಾಲ ಮಾಡಿ ಅದನ್ನು ತೀರಿಸುವ ಹಂತದಲ್ಲಿರುವ, ಮನೆಯ ಜವಾಬ್ದಾರಿ ಹೊತ್ತಿರುವ, ಉತ್ತಮ ಜೀವನದ ಕನಸನ್ನು ಕಣ್ಣುಗಳಲ್ಲಿ ತುಂಬಿಕೊಂಡಿರುವ ಕಿರಿಯ ವೈದ್ಯರಿಗೆ ಈ ಅಸುರಕ್ಷತೆಯ ಭಾವ ಬದುಕನ್ನೇ ಝರ್ಝರಗೊಳಿಸಬಲ್ಲದು. ಇಂತಹ ಸಂದರ್ಭಗಳಲ್ಲಿ ತಪ್ಪು-ಒಪ್ಪುಗಳ ಮಧ್ಯದ ವ್ಯತ್ಯಾಸ ಅಳಿಯಬಹುದು. ಪುಣ್ಯವಶಾತ್, ಕೆಲವು ಸಹೃದಯೀ ಹಿರಿಯ ವೈದ್ಯರು ಇಂತಹ ಕಿರಿಯ ವೈದ್ಯರ ಬೆಂಬಲಕ್ಕೆ ಬಹಳ ಸಾರಿ ನಿಲ್ಲುತ್ತಾರೆ.

ಆದರೆ ಆಕ್ರೋಶಿತ ರೋಗಿಯ ಪರಿವಾರದ ದೌರ್ಜನ್ಯವನ್ನು ಎದುರಿಸುವುದು ಎಂತಹ ವೈದ್ಯನಿಗೂ ಸಾಧ್ಯವಿಲ್ಲ. ತನ್ನದಲ್ಲದ ಹೊಣೆಗೆ ತಾನು ದೈಹಿಕ, ಮಾನಸಿಕ ಶಿಕ್ಷೆಗೆ ಒಳಗಾಗುವ ಈ ಪ್ರಕ್ರಿಯೆ ವೈದ್ಯರ ಜೀವನದ ಮೂಲೋದ್ದೇಶವನ್ನೇ ನಾಶ ಮಾಡಬಲ್ಲದು. ಅಂತಹ ಹಲ್ಲೆಗೆ ಒಳಗಾದ ವೈದ್ಯ ಪುನಃ ಸಹಜವಾಗುವುದು ಬಹಳ ಕಷ್ಟ. ಮನುಷ್ಯತ್ವದ ಮೇಲೆ, ಒಳ್ಳೆಯತನದ ಮೇಲೆ ನಂಬಿಕೆಯೇ ನಾಶವಾಗುವ ಸಂದರ್ಭಗಳಿವು. 

ಕೇವಲ ದೈಹಿಕ ದೌರ್ಜನ್ಯವಷ್ಟೇ ಅಲ್ಲ. ವೈದ್ಯರು ಕಾನೂನಿನ ಆಘಾತಗಳನ್ನೂ ಎದುರಿಸಬೇಕು. ವೈದ್ಯರು ತಪ್ಪು ಮಾಡಿದ್ದಾರೆ ಎಂಬ ಯಾವುದೇ ಗುಮಾನಿ ಇದ್ದರೂ ಸಾಕು; ಅಂತಹ ವೈದ್ಯರ ಮೇಲೆ ಆಸ್ಪತ್ರೆಯ ನಿರ್ದೇಶಕರಲ್ಲಿ, ಆಯಾ ರಾಜ್ಯದ ವೈದ್ಯಕೀಯ ಮಂಡಳಿಯಲ್ಲಿ, ಗ್ರಾಹಕ ವೇದಿಕೆಯಲ್ಲಿ, ಆರಕ್ಷಕ ಠಾಣೆಯಲ್ಲಿ, ಕೆಳಗಿನ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಚ ನ್ಯಾಯಾಸ್ಥಾನದವರೆಗೆ ಎಲ್ಲಿ ಬೇಕಾದರೂ ದೂರು ನೀಡಿ ಪ್ರಕರಣ ದಾಖಲಿಸಬಹುದು. ಆಸ್ಪತ್ರೆಯ ಮೇಲೆ ದೂರು ದಾಖಲಾದರೂ ಜೊತೆಗೆ ವೈದ್ಯರದ್ದೂ ಹೊಣೆ. ಕೇವಲ ವೈದ್ಯರ ಮೇಲೆ ದೂರು ದಾಖಲಾದರೆ ಎಷ್ಟೋ ಬಾರಿ ಆಸ್ಪತ್ರೆ ವೈದ್ಯರ ಬೆಂಬಲಕ್ಕೆ ನಿಲ್ಲದೆ ಹೋಗಬಹುದು. ಇದರ ಮೇಲೆ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಏನಾದರೂ ರಸವತ್ತಾದ ಸುದ್ದಿಗೆ ಕಾಯುವ ದೃಶ್ಯ ಮಾಧ್ಯಮಕ್ಕೆ ತನ್ನ ತೀರ್ಪು ನೀಡುವ ಅವಸರ. ಅವರಿಗೆ ವಿಚಾರಣೆಯೂ ಬೇಡ; ಸತ್ಯವೂ ಬೇಡ. ಮತ್ತೊಬ್ಬರ ಜೀವನ ಅವರಿಗೆ ಮನರಂಜನೆ ಮಾತ್ರ.

ಕೇವಲ ದೊಡ್ಡದೊಡ್ಡ ಆಸ್ಪತ್ರೆಗಳ ಮೇಲೆ ಮಾತ್ರ ಈ ರೀತಿಯ ಹಲ್ಲೆ ಆಗುತ್ತಿದೆಯೇ? ಸರ್ಕಾರಿ ಆಸ್ಪತ್ರೆ, ಸಣ್ಣಸಣ್ಣ ನರ್ಸಿಂಗ್ ಹೋಂ ಗಳ ಮೇಲೂ ಆಗುತ್ತಿವೆ ಅಲ್ಲವೇ? ಇದಕ್ಕೆ ಕಾರಣವೇನು? ಎಂಬುದು ಪ್ರಶ್ನೆ. ಈ ಮಾತು ಸರಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಯಾವುದೇ ಕಾನೂನಿನ ಭಂಗಕ್ಕೆ ಶಿಕ್ಷೆ ಆಗದೆ ಹೋದರೆ ಹಲ್ಲೆಕೋರರಿಗೆ ಒಂದು ಬಗೆಯ ಧೈರ್ಯ ಹುಟ್ಟುತ್ತದೆ. ತಾನು ಮಾಡಿದ್ದು ಸರಿ ಎಂಬ ಮಾನಸಿಕ ಸ್ಥಿತಿ ಏರ್ಪಡುತ್ತದೆ. ಅದರ ಮೇಲೆ ರಾಜಕಾರಣ ಈ ವಿಷಯದಲ್ಲಿ ತಲೆ ಹಾಕಿ ಹಲ್ಲೆಕೊರರನ್ನು ಸಮರ್ಥಿಸಿಕೊಳ್ಳುವ ಒಂದು ಮಾತನ್ನು ಆಡಿದರೂ ಸಾಕು; ಇಂತಹ ಹಲ್ಲೆಕೋರರ ಸಂಖ್ಯೆ ನೂರಾರು ಪಟ್ಟು ಬೆಳೆಯುತ್ತದೆ. ತಮ್ಮ ಹೀರೋಗಿರಿ ಮೆರೆಯಲು ಅಂತಹವರು ಅವಕಾಶಕ್ಕೆ ಕಾಯುತ್ತಾರೆ. ಯಾವುದೋ ಹಳೆಯ ದ್ವೇಷವನ್ನೋ, ವೈಮನಸ್ಯವನ್ನೋ ಕಾರಣವಾಗಿ ಇಟ್ಟುಕೊಂಡು ಸಮಯ ಸಿಕ್ಕಾಗ ಅದನ್ನು ತೀರಿಸಿಕೊಳ್ಳುತ್ತಾರೆ. ಎಷ್ಟೋ ಬಾರಿ ಹಲ್ಲೆ ಮಾಡಿದವರಿಗೂ, ಮೃತರೋಗಿಯ ಪರಿವಾರದವರಿಗೂ ಸಂಬಂಧವೇ ಇರುವುದಿಲ್ಲ. ಹೀಗಾಗಿ ಒಮ್ಮೆ ಭುಗಿಲೆದ್ದ ಈ ರೀತಿಯ ಚಿಂಗಾರಿ ನೂರಾರು ರೂಪಗಳನ್ನು ಪಡೆದು ಅವಕಾಶ ಇದ್ದೆಡೆಯೆಲ್ಲಾ ಸುಡತೊಡಗುತ್ತದೆ. ಈ ಅಪಾಯಕಾರಿ ಪ್ರವೃತ್ತಿ ಅತ್ಯಂತ ಹೇಯವಾದದ್ದು. ಇದರ ದೂರಗಾಮಿ ಪರಿಣಾಮಗಳು ತೀವ್ರರೂಪ ಪಡೆದು ರೋಗಿಗಳ ಚಿಕಿತ್ಸೆಯ ಪಾಲಿಗೆ ಪ್ರತಿಕೂಲವಾಗಬಹುದು. ಇದನ್ನು ಮೊಳಕೆಯಲ್ಲಿ ಚಿವುಟಿ ಹಾಕುವ ಹೊಣೆ ವ್ಯವಸ್ಥೆಯದ್ದು. ಆದರೆ ವ್ಯವಸ್ಥೆಯೆಂಬ ಕುಂಭಕರ್ಣ ಎದ್ದರೆ ತಾನೇ?

ಒಟ್ಟಿನಲ್ಲಿ, ಯಾರದೋ ತಪ್ಪು; ಯಾರದೋ ಲಾಠಿ – ಒದೆ ತಿಂದವರು ಮಾತ್ರ ವೈದ್ಯರು ಎಂಬ ದಯನೀಯ ಸ್ಥಿತಿಯಲ್ಲಿ ವೈದ್ಯರಂಗ ಬಂದು ತಲುಪಿದೆ. ಇಲ್ಲಿ ಎಲ್ಲರೂ ತೀರ್ಪು ನೀಡುವವರೇ! ಆದರೆ ಅಸಲಿ ಪ್ರಶ್ನೆ ಮಾತ್ರ ಯಾರೂ ಕೇಳುತ್ತಿಲ್ಲ. ದೇಶದ ಪ್ರಜೆಗಳ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರದ ಹೊಣೆಗಾರಿಕೆ ಏನು? ಈ ಹೊಣೆಗಾರಿಕೆಯಲ್ಲಿ ಸರ್ಕಾರ ವಿಫಲವಾದರೆ ದೇಶದ ಕಾನೂನಿನಲ್ಲಿ ಪ್ರಜೆಗಳನ್ನು ರಕ್ಷಿಸುವ ಯಾವ ವಿಧಾನಗಳಿವೆ? ಅದನ್ನು ನಿರ್ವಹಿಸಬೇಕಾದವರು ಯಾರು? ಪ್ರಾಯಶಃ ಈ ಪ್ರಶ್ನೆಗಳನ್ನು ಕೇಳುವವರೂ ಇಲ್ಲ; ಕೇಳಿದರೆ ಉತ್ತರಿಸುವವರೂ ಇಲ್ಲ. ಒಳ್ಳೆಯ ಪರಿಹಾರಗಳನ್ನು ಹೇಳುವ ಮಂದಿ ಇದ್ದಾರೆ. ಆದರೆ ಅಂತಹ ಪರಿಹಾರಗಳನ್ನು ಕೇಳುವ ಒಳ್ಳೆಯ ಸರ್ಕಾರಗಳು, ಒಳ್ಳೆಯ ವ್ಯವಸ್ಥೆ ನಮ್ಮ ನಸೀಬಿನಲ್ಲಿ ಇಲ್ಲ ಅಷ್ಟೇ. ಜನತೆ ಎಚ್ಚೆತ್ತುಕೊಂಡರೆ ಉಳಿಗಾಲ; ಹೀಗೆ ಅನಾಗರೀಕವಾಗಿ ಮುಂದುವರೆದರೆ ಮುಂದಿನ ಪೀಳಿಗೆಗೆ ಉತ್ತರಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ.