ಶುಕ್ರವಾರ, ಜುಲೈ 10, 2020


ಮತ್ತೊಂದು ಲೇಖನ! ಪ್ರಜಾವಾಣಿ 9/ಜುಲೈ/2020
1870 ರ ದಶಕದಲ್ಲಿ ಅಮೆರಿಕನ್ ಕತೆಗಾರ ಫ್ರಾಂಕ್ ಸ್ಟಾಕ್ಟನ್ ಒಂದು ಸಣ್ಣ ಕತೆ ಪ್ರಕಟಿಸಿದರು. ಒಂದೂರಿನಲ್ಲಿ ಒಬ್ಬ ರಾಜ. ಆತನಿಗೆ ಚಂದದ ಮಗಳು. ರಾಜಕುಮಾರಿಗೆ ಓರ್ವ ಸಾಮಾನ್ಯ ಸೈನಿಕನ ಮೇಲೆ ಒಲವಾಗಿದೆ. ರಾಜನಿಗೆ ಇದು ಇಷ್ಟವಿಲ್ಲ. ಆ ಸೈನಿಕನ ಮೇಲೆ ಏನೋ ದೋಷ ಆರೋಪಿಸಿ ಶಿಕ್ಷೆಗೆ ಒಳಪಡಿಸುತ್ತಾನೆ. ಎರಡು ಬಾಗಿಲುಗಳಿರುವ ಒಂದು ಕೋಣೆಯಲ್ಲಿ ಸೈನಿಕನನ್ನು ಬಿಟ್ಟು, ಅವೆರಡರಲ್ಲಿ ಒಂದು ಬಾಗಿಲನ್ನು ತೆಗೆಯಬೇಕೆಂದು ಆಜ್ಞಾಪಿಸುತ್ತಾನೆ. ಒಂದು ಬಾಗಿಲಿನ ಹಿಂದೆ ಭಯಂಕರವಾದ ಹುಲಿಯಿದೆ. ಅದನ್ನು ತೆಗೆದರೆ, ಹುಲಿ ಸೈನಿಕನನ್ನು ಖಚಿತವಾಗಿ ಕೊಲ್ಲುತ್ತದೆ. ಎರಡನೆಯ ಬಾಗಿಲಿನ ಹಿಂದೆ ಓರ್ವ ಯುವತಿ ಇದ್ದಾಳೆ. ಆ ಬಾಗಿಲನ್ನು ತೆರೆದರೆ ಸೈನಿಕ ಆಕೆಯನ್ನು ಮದುವೆಯಾಗುವುದು ಕಡ್ಡಾಯ. ಮಹಡಿಯ ಮೇಲಿನಿಂದ ಎಲ್ಲರೂ ಈ ಪ್ರಸಂಗವನ್ನು ನೋಡುತ್ತಿದ್ದಾರೆ. ಯಾವ ಬಾಗಿಲಿನ ಹಿಂದೆ ಏನಿದೆ ಎಂಬುದನ್ನು ಕಡೆಯ ಕ್ಷಣದಲ್ಲಿ ಪತ್ತೆ ಮಾಡಿದ ರಾಜಕುಮಾರಿ, ಆ ಸೈನಿಕನಿಗೆ ದೂರದಿಂದಲೇ ಒಂದು ಬಾಗಿಲನ್ನು ತೆರೆಯುವ ಸೂಚನೆ ನೀಡುತ್ತಾಳೆ. ಸೈನಿಕ ಒಪ್ಪಿ, ಆ ಬಾಗಿಲು ತೆರೆಯುತ್ತಾನೆ. ಕತೆ ಇಲ್ಲಿಗೆ ನಿಲ್ಲುತ್ತದೆ.
ಈ ಕತೆಯ ಅಂತ್ಯವನ್ನು ಊಹಿಸುವುದು, ಆಯಾ ಓದುಗರ ಇಡೀ ಜೀವನದ ಅನುಭವಗಳ ಒಟ್ಟು ಸಾರವನ್ನು ತೋರುತ್ತದೆ ಎಂದು ತತ್ತ್ವಜ್ಞಾನಿಗಳ ಅಭಿಪ್ರಾಯ. ಕುತೂಹಲ ಎಂದರೆ, “ರಾಜಕುಮಾರಿ ಯಾವುದನ್ನು ಸೂಚಿಸಿರಬಹುದು” ಎಂದು ಓದುಗರು ಆಲೋಚನೆ ಮಾಡುವುದಕ್ಕೂ, “ತಾವೇ ರಾಜಕುಮಾರಿಯ ಸ್ಥಾನದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೆವು” ಎನ್ನುವ ಎರಡು ಅಭಿಪ್ರಾಯಗಳ ನಡುವೆಯೇ ಬಹಳ ಓದುಗರಲ್ಲಿ ಭಿನ್ನಾಭಿಪ್ರಾಯ ಇರುತ್ತಿತ್ತು! ಈ ದ್ವಂದ್ವ ಕೂಡ ಅವರವರ ಮಾನಸಿಕತೆಯ ಚಿತ್ರಣವೇ!
ಆ ಅಮೆರಿಕನ್ ಲೇಖಕರಿಗೆ ಈ ಕತೆಯ ಹಿಂದಿನ ತಾತ್ವಿಕತೆಯ ಪರಿಚಯ ಇತ್ತೋ ಇಲ್ಲವೋ ತಿಳಿಯದು! ಆದರೆ, ಪ್ರಾಚೀನ ತತ್ತ್ವಜ್ಞಾನಿಗಳು ಮುಕ್ತ ಚಿಂತನೆಯ ಪ್ರತಿಪಾದಕರಾಗಿದ್ದರು ಎಂಬುದು ಬಹಳ ಜನಕ್ಕೆ ತಿಳಿದಿರಲಿಕ್ಕಿಲ್ಲ. ಆಯ್ಕೆಯ ಮಹತ್ವಗಳನ್ನು ಸಾರುವ ಅನೇಕ ಪ್ರಮಾಣಗಳು ದೊರಕುತ್ತವೆ. ರಾಬರ್ಟ್ ಫ್ರಾಸ್ಟ್ ಅವರ The Road not Taken ಕವಿತೆಯಾಗಲೀ, ಅಥವಾ ಹ್ಯಾರಿ ಪಾಟರ್ ಸರಣಿಯಲ್ಲಿ ಡಂಬಲ್ಡೋರ್ ಮಹಾಶಯ ಹೇಳುವ It is our choices that show what we truly are, far more than our abilities ಎನ್ನುವ ಮಾತಾಗಲೀ, ಪ್ರಾಚೀನ ತತ್ತ್ವದ ಆಧುನಿಕ ಅವತಾರವೇ! ಪ್ರಾಚೀನ ತತ್ತ್ವಜ್ಞಾನ ನೀಡಿದಷ್ಟು ಆಯ್ಕೆಯ ಅವಕಾಶಗಳನ್ನು ಪ್ರಾಯಶಃ ಮಧ್ಯಕಾಲೀನ ಅವಧಿ ನೀಡಲಿಲ್ಲ. ಅದಕ್ಕೆ ಕಾರಣಗಳು ಏನೇ ಇದ್ದರೂ, ಆಯ್ಕೆಗಳ ಸ್ವಾತಂತ್ರ್ಯ ಬಹಳ ಮಹತ್ವದ್ದು.
ಆಯ್ಕೆ ಮತ್ತು ಆಯ್ಕೆಗಳ ಭ್ರಮೆಯ ನಡುವೆ ಕೂಡ ಇರುವ ವ್ಯತ್ಯಾಸ ಗಮನಾರ್ಹ. ಸ್ಟಾಕ್ಟನ್ ಅವರ ಕತೆಯಲ್ಲಿ ಸೈನಿಕನಿಗೆ ಆಯ್ಕೆಯ ಭ್ರಮೆ ಇದೆ; ಆಯ್ಕೆಗಳಿಲ್ಲ! ನೈಜಾರ್ಥದಲ್ಲಿ ರಾಜಕುಮಾರಿಗೆ ಕೂಡ ಇರುವುದು ಆಯ್ಕೆಗಳ ಭ್ರಮೆಯೇ! ಅಂತೆಯೇ, ಓದುಗರಿಗೆ ಕೂಡ!
----------------------------

ಶನಿವಾರ, ಜುಲೈ 4, 2020


ಪತ್ರಿಕೆಗಳಲ್ಲಿ ವಿಜ್ಞಾನದ ವಿಷಯ ಬಿಟ್ಟು ಬೇರೆ ಏನಾದರೂ ಕಡೆಯ ಬಾರಿ ಬರೆದದ್ದು ಪ್ರಾಯಶಃ 1994 ರಲ್ಲಿ!
ಇಂದಿನ "ಪ್ರಜಾವಾಣಿ"ಯಲ್ಲಿ ಒಂದು ಸಣ್ಣ ಪ್ರಯತ್ನ! (25/06/2020)
ಧನ್ಯವಾದಗಳು
Suryaprakash Pandit
ಸರ್!
“ಕೇಳಿದ ಪ್ರಶ್ನೆಗೆ ಅತ್ಯಂತ ನಿಖರ ಉತ್ತರ ನೀಡಿದವರಿಗೆ ಆ ವಿಷಯದ ಬಗ್ಗೆ ಜ್ಞಾನವಿದೆ” ಎನ್ನಬಹುದೇ? ಅಮೆರಿಕದ ತತ್ತ್ವಶಾಸ್ತ್ರಜ್ಞ ಜಾನ್ ಸೆರ್ಲ್ ಈ ನಂಬಿಕೆಯನ್ನು ಪ್ರಶ್ನಿಸಿದ್ದರು. “ಅಂಕಿ 2 ರ ವರ್ಗಮೂಲ ಏನು?” ಎಂದಾಗ, “ಯಾವ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದರೆ ಉತ್ತರ 2 ಎಂದಾಗುವುದೋ ಅದೇ” ಎನ್ನುವ ಉತ್ತರ ಅತ್ಯಂತ ನಿಖರ. ಆದರೆ, ಇದು ಜ್ಞಾನವಲ್ಲ; ಜಾಣತನ, ಸಮಯಸ್ಪೂರ್ತಿ ಅಷ್ಟೇ! ಸೆರ್ಲ್ ಅವರ ಒಂದು ಪ್ರಯೋಗವಿದೆ. ಅಜ್ಞಾತ ಭಾಷೆಯ ಅಕ್ಷರಗಳನ್ನು ಹಚ್ಚಿರುವ ಪೆಟ್ಟಿಗೆಗಳು ತುಂಬಿರುವ ಕೋಣೆಯಲ್ಲಿ ನೀವಿದ್ದೀರಿ ಎಂದು ಭಾವಿಸಿ. ಅಜ್ಞಾತ ಭಾಷೆ ತಿಳಿಯದ ನಿಮ್ಮಲ್ಲಿ ಆ ಅಕ್ಷರಗಳ ಇಂಗ್ಲೀಷ್ ಸಮಾನಾರ್ಥದ ಕೈಪಿಡಿಯಿದೆ. ಕಿಟಕಿಯ ಮೂಲಕ ಇಂಗ್ಲೀಷ್ ಚೀಟಿ ನೀಡುತ್ತಾರೆ. ಕೈಪಿಡಿಯ ಸಹಾಯದಿಂದ ಅದಕ್ಕೆ ಸಂಬಂಧಿಸಿದ ಪೆಟ್ಟಿಗೆಗಳನ್ನು ಹುಡುಕಿ ಅವರಿಗೆ ನೀಡುತ್ತೀರಿ. ಕೆಲಕಾಲದಲ್ಲೇ ನಿಮ್ಮ ಪರಿಣತಿ ಬೆಳೆಯುತ್ತದೆ. ಆದರೆ, ನಿಮ್ಮ ಜ್ಞಾನ ಬೆಳೆಯಿತೇ? ಕಂಪ್ಯೂಟರ್ ಕೂಡ ಇದೇ ಕೆಲಸ ಮಾಡುತ್ತದೆಯಾದರೂ, ಅದು ಜ್ಞಾನಿ ಆಗುವುದಿಲ್ಲ! ಅಜ್ಞಾತ ಭಾಷೆಯನ್ನು ಅರಿಯುವವರೆಗೆ ಜ್ಞಾನ ಮೂಡುವುದಿಲ್ಲವಷ್ಟೆ?
ಅಂದರೆ, “ಜ್ಞಾನ” ಎನ್ನುವುದು ಕೇವಲ ಸರಿಯಾದ ಉತ್ತರದಲ್ಲೂ ಇಲ್ಲ; ಅಥವಾ ಅನುಭವಜನ್ಯ ಕೆಲಸದ ಪರಿಣತಿಯಲ್ಲೂ ಇಲ್ಲ! ಅದು ಇರುವುದು ಅರಿವಿನಲ್ಲಿ; ಆ ಅರಿವು ನಮ್ಮಲ್ಲಿ ಮೂಡಿಸುವ ಚಿಂತನೆಯ ಪ್ರಕ್ರಿಯೆಯಲ್ಲಿ. ಮಾತು ಮತ್ತು ಕೃತಿಗಳ ಮಿತಿಗಳನ್ನು ಮೀರಿದ್ದು ಜ್ಞಾನ! ಶಕಪೂರ್ವ 6 ನೆಯ ಶತಮಾನದ ಗ್ರೀಕ್ ತತ್ತ್ವಜ್ಞಾನಿ ಹೆರಕ್ಲೈಟಸ್ ಇದೇ “ಜ್ಞಾನ”ದ ಬಗೆಗೆ ಚರ್ಚೆ ಮಾಡುತ್ತಾರೆ. “ಸಂಪ್ರದಾಯಗಳ ಹಿಂದಿನ ಮರ್ಮವನ್ನು ಅರಿಯುವುದು, ಅದನ್ನು ಪಾಲಿಸುವುದಕ್ಕಿಂತ ದೊಡ್ಡದು” ಎನ್ನುವ ನಿಲುವು ಅವರದ್ದು. ಭಾರತೀಯ ತತ್ತ್ವಜ್ಞಾನ ಪ್ರಾಚೀನ ಕಾಲದಿಂದಲೂ ಇದೇ ನಿಲುವನ್ನೇ ತಾಳಿದೆ; ಶಬ್ದಜಾಲದ ನಿರರ್ಥಕತೆ, ಚಿತ್ತಭ್ರಾಮಕತೆಯನ್ನು ಸೊಗಸಾಗಿ ಬಿಂಬಿಸಲಾಗಿದೆ.
ಪ್ರಸ್ತುತ ಭಾಷಾಶಾಸ್ತ್ರ “ಜ್ಞಾನ” ಎಂಬುದಕ್ಕೆ ಸಾಕಷ್ಟು ಅರ್ಥಗಳನ್ನು ಕೊಡುತ್ತದೆ. ಪ್ರಾಯೋಗಿಕ ದೃಷ್ಟಿಯಿಂದ ಅವುಗಳಿಗೆಲ್ಲಾ ಏನೋ ಒಂದು ಮಹತ್ವ ಇರುತ್ತದೆ! ವಿಭಿನ್ನ ಭಾಷೆಗಳ ನಡುವೆ ಸಮಾನಾರ್ಥಕ ಪದಗಳ ಹುಡುಕಾಟ ನಡೆಯುತ್ತದೆ. ಇಂತಹ ಪ್ರಯೋಗಗಳ ಮಧ್ಯೆ ನೈಜಾರ್ಥ ಯಾವುದೋ ಒಂದು ಹಂತದಲ್ಲಿ ಕಳೆದುಹೋಗುವ ಅಪಾಯ ಇದ್ದೇ ಇದೆ.
ಇದು ಕೃತಕ ಬುದ್ಧಿಮತ್ತೆಯ ಯುಗ! ಅನುಭವಜನ್ಯವಾದ ಜಾಣತನವನ್ನು ಯಂತ್ರಗಳಿಗೆ ಕಲಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜ್ಞಾನದ ಪರಿಭಾಷೆ ಮತ್ತೊಮ್ಮೆ ಬದಲಾಗುವ ಸ್ಥಿತ್ಯಂತರದ ಕಾಲ ಬಂದಿದೆ. ಉದ್ಯಾನದಲ್ಲಿ ನೀರಿನ ಒತ್ತಡದಿಂದ ಎದ್ದು ನಿಲ್ಲುವ ಗೊಂಬೆಗಳ ಜೊತೆಗಿನ ಇಂತಹದೇ ಒಂದು ಅನುಭವ, ಫ್ರೆಂಚ್ ತತ್ತ್ವಜ್ಞಾನಿ ಡೆಕಾರ್ಟೆ ಅವರಲ್ಲಿ ಅಸ್ತಿತ್ವದ ಕುರಿತಾಗಿ ಪ್ರಶ್ನೆ ಹುಟ್ಟುಹಾಕಿತು. ಯುರೋಪಿನ ಆಧುನಿಕ ತತ್ತ್ವಜ್ಞಾನದ ಆರಂಭ ಕೂಡ ಪ್ರಾಚೀನ ಪ್ರಶ್ನೆಗಳನ್ನೇ ಆಧಾರವಾಗಿ ಹೊಂದಿದೆ ಎಂದಾಯಿತು! ಜ್ಞಾನದ ಪರಿಭಾಷೆ ಪುನರುಜ್ಜೀವನಗೊಳ್ಳುವುದು ಸಹ ಪ್ರಾಚೀನ ಭಾರತೀಯ ಮತ್ತು ಗ್ರೀಕ್ ತತ್ತ್ವಜ್ಞಾನಿಗಳು ಹೇಳಿದ್ದ “ಆವರ್ತನ” ಪ್ರಕ್ರಿಯೆಯ ಭಾಗವೇ ಸರಿ!
--------------------------------

ಲೇಖನದ ಲಿಂಕ್: http://epaper.prajavani.net/data/pp3-20200625_14/webepaper/pdf/694073.pdf