ಶನಿವಾರ, ಜನವರಿ 18, 2020








ಚೀನಾದಲ್ಲಿ ಹೊಸ ಸಾಂಕ್ರಾಮಿಕ ಕಾಯಿಲೆ – ನಾವೇನು ಮಾಡಬಹುದು?
ಡಾ. ಕಿರಣ್ ವಿ. ಎಸ್.
ವೈದ್ಯರು
ಬೀಜಿಂಗ್ ನಿಂದ ಸುಮಾರು 1100 ಕಿ ಮೀ ದೂರದಲ್ಲಿನ ವುಹಾನ್ ನಗರದಲ್ಲಿ ಈ ಬಾರಿ ಹೊಸವರ್ಷದ ಸಂಭ್ರಮಾಚರಣೆ ಜರುಗಲಿಲ್ಲ. ಸುಮಾರು ಒಂದು ಕೋಟಿ ಜನಸಂಖ್ಯೆಯ ಆ ನಗರದ ಪ್ರಸಿದ್ಧ ಮಾಂಸದ ಮಾರುಕಟ್ಟೆಯನ್ನು ಚೀನಾ ಸರಕಾರ ಆ ದಿನ ಹಠಾತ್ತನೆ ಬಂದ್ ಮಾಡಿತ್ತು. ಒಂದು ಸಾವಿರಕ್ಕೂ ಹೆಚ್ಚಿನ ಅಂಗಡಿಗಳು ಇರುವ ಆ ಮಾರುಕಟ್ಟೆಯ ಅಂಗಡಿ ಮಾಲೀಕರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. 

ಹೀಗೆ ಮಾಡುವುದಕ್ಕೆ ಬಲವಾದ ಕಾರಣವಿತ್ತು. ವುಹಾನ್ ಆಸ್ಪತ್ರೆಯಲ್ಲಿ ಉಸಿರಾಟದ ಸೋಂಕಿನಿಂದ ಕಳೆದ ಡಿಸೆಂಬರ್ 12 ರಂದು ದಾಖಲಾಗಿದ್ದ ಒಬ್ಬ ರೋಗಿಗೆ ಒಂದು ಹೊಸ ಮಾದರಿಯ, ಪ್ರಪಂಚದಲ್ಲಿ ಇದುವರೆಗೂ ದಾಖಲಾಗದ ನ್ಯುಮೋನಿಯಾ ಕಾಯಿಲೆ ಇದೆ ಎಂದು ತಿಳಿದುಬಂದಿತ್ತು. 31 ನೆಯ ಡಿಸೆಂಬರ್ ವೇಳೆಗೆ ಸುಮಾರು 27 ಮಂದಿಗೆ ಅದೇ ಕಾಯಿಲೆ ಬಂದಿತ್ತು. ಅವರಲ್ಲಿ ಏಳು ರೋಗಿಗಳು ಪ್ರಾಣಾಪಾಯದ ಸ್ಥಿತಿಯಲ್ಲಿ ಇದ್ದರು. ಆ ವೇಳೆಗೆ ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಿದ್ದ ಅಲ್ಲಿನ ಸೋಂಕು-ರೋಗ ತಜ್ಞರು ಕಾಯಿಲೆಯ ಮೂಲ ವುಹಾನ್ ನಗರದ ಮಾಂಸದ ಮಾರುಕಟ್ಟೆ ಇರಬಹುದು ಎಂದು ಶಂಕಿಸಿದ್ದರು. ಆ ಕಾರಣಕ್ಕೆ ಸರಕಾರ ಕೂಡಲೇ ಕಾರ್ಯ ಪ್ರವೃತ್ತವಾಗಿತ್ತು. 

ಅಲ್ಲಿ ಆದದ್ದಾದರೂ ಏನು? ಈ ಪ್ರಶ್ನೆಗೆ ಉತ್ತರ ಪಡೆಯಲು ಕೆಲವು ಮಹತ್ವದ ವಿಷಯಗಳನ್ನು ತಿಳಿಯಬೇಕು. ಈ ರೀತಿಯ ವೈರಸ್ ಕಾಯಿಲೆಗಳು ಪ್ರಪಂಚವನ್ನು ಆಗಾಗ ಕಂಗೆಡಿಸುತ್ತಲೇ ಇರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಹಕ್ಕಿ ಜ್ವರ, ಹಂದಿ ಜ್ವರ, ಸಾರ್ಸ್, H1N1 ಮುಂತಾದ ಕಾಯಿಲೆಗಳು ಜನತೆಯ ನೆಮ್ಮದಿಯನ್ನು ಕದಡಿವೆ. ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ದೇಶಗಳ ಆರ್ಥಿಕ ವ್ಯವಸ್ಥೆಯನ್ನೇ ಇವು ಬುಡಮೇಲು ಮಾಡಿದ್ದವು. 2002 ರಲ್ಲಿ ಹರಡಿದ್ದ  ಸಾರ್ಸ್ ಕಾಯಿಲೆ ಕೂಡ ಚೀನಾ ದೇಶದಿಂದಲೇ ಆರಂಭವಾಗಿತ್ತು. ಆದರೆ ಅಲ್ಲಿನ ಸರಕಾರ ಆಗ ಆ ಕಾಯಿಲೆಯನ್ನು ಗಣನೀಯವಾಗಿ ಪರಿಗಣಿಸಲಿಲ್ಲ. ಇದರಿಂದ ಆ ಕಾಯಿಲೆ ಪ್ರಪಂಚದಲ್ಲೆಲ್ಲಾ  ಹರಡಿ ಸುಮಾರು 700 ಮಂದಿ ಸಾವಿಗೀಡಾದರು. ಚೀನಾ ಸರ್ಕಾರದ ನಿರ್ಲಕ್ಷ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ಕಟುವಾಗಿ ನಿಂದಿಸಿತ್ತು. ಇದೇ ಕಾರಣಕ್ಕೆ ಚೀನಾ ಸರಕಾರ ಈಗ ಸಮರೋಪಾದಿಯಲ್ಲಿ ಸದ್ಯದ ಕಾಯಿಲೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. 

2009 ರಲ್ಲಿ ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ H1N1 ವೈರಲ್ ನ್ಯುಮೋನಿಯಾ ಕಾಯಿಲೆ ಹಬ್ಬಿತ್ತು. ಜನರು ಮಾಸ್ಕ್ ಗಳನ್ನು ಧರಿಸಿ ಓಡಾಡುತ್ತಿದ್ದರು. ಆಗಾಗ್ಗೆ ಹೀಗೇಕೆ ಆಗುತ್ತದೆ ಎಂದು ಅರಿಯಲು ಸೋಂಕು ತರುವ ವೈರಸ್ ಗಳ ಬಗ್ಗೆ ತಿಳಿಯಬೇಕು. ಜಗತ್ತಿನಲ್ಲಿ ಕಾಯಿಲೆ ತರಬಲ್ಲ ನೂರಾರು ಬಗೆಯ ವೈರಸ್ ಗಳು ಇವೆ. ಇವುಗಳಲ್ಲಿ ಬಹುತೇಕ ವೈರಸ್ ಗಳು ಹೆಚ್ಚು ಅಪಾಯ ಮಾಡುವುದಿಲ್ಲ. ಜೊತೆಗೆ, ಇಂತಹ ವೈರಸ್ ಕಾಯಿಲೆಗಳು ಆಗಾಗ ಬಂದು ಅವುಗಳ ವಿರುದ್ಧ ನಮ್ಮ ಶರೀರ ತಕ್ಕ ಮಟ್ಟಿಗೆ ರಕ್ಷಣೆಯನ್ನೂ ಪಡೆದುಕೊಂಡಿರುತ್ತದೆ. ಹೀಗಾಗಿ, ಇವುಗಳಿಂದ ಪ್ರಾಣಾಪಾಯ ಆಗುವಂತಹ ಸಂಭವ ತೀರಾ ಕಡಿಮೆ. 

ಆದರೆ, ವೈರಸ್ ಗಳ ಆಂತರ್ಯದಲ್ಲಿ ಜೆನೆಟಿಕ್ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇದರಿಂದ ವೈರಸ್ ಮೇಲ್ಮೈ  ಪ್ರೊಟೀನ್ ಗಳು ಬದಲಾಗುತ್ತವೆ. ಈ ಹೊಸ ಮಾದರಿಯ ಪ್ರೊಟೀನ್ ಗಳ ಕಾರಣದಿಂದ ನಮ್ಮ ಶರೀರದ ರಕ್ಷಣೆಯ ವ್ಯವಸ್ಥೆ ಅದನ್ನು ಹೊಸ ವೈರಸ್ ಎಂದೇ ಪರಿಗಣಿಸುತ್ತದೆ. ವೈರಸ್ ಗಳಲ್ಲಿ ಅಲ್ಪ-ಸ್ವಲ್ಪ ಬದಲಾವಣೆ ಆಗಿದ್ದರೆ ನಮ್ಮ ರಕ್ಷಣೆಯ ವ್ಯವಸ್ಥೆಗೆ ಹೆಚ್ಚು ತೊಂದರೆ ಆಗುವುದಿಲ್ಲ. ಈ ಸಣ್ಣ ಬದಲಾವಣೆಗಳನ್ನು ಅದು ಆರಾಮವಾಗಿ ನಿಭಾಯಿಸುತ್ತದೆ. ಆದರೆ, ಕೆಲವೊಮ್ಮೆ ವೈರಸ್ ಗಳ ಜೆನೆಟಿಕ್ ಬದಲಾವಣೆ ಬಹಳ ತೀವ್ರವಾಗಿ ಆಗುತ್ತವೆ. ಆಗ ಅದರ ಮೇಲ್ಮೈನ ಬಹುತೇಕ ಪ್ರೊಟೀನ್ ಗಳು ಬದಲಾಗುತ್ತವೆ. ನಮ್ಮ ರಕ್ಷಣೆಯ ವ್ಯವಸ್ಥೆಯ ಪಾಲಿಗೆ ಇದು ಹೊಚ್ಚ-ಹೊಸ ವೈರಸ್. ಇಂತಹ ಮಾರ್ಪಾಡು ಹೊಂದಿದ ವೈರಸ್ ಗಳ ವಿರುದ್ಧ ಶರೀರದಲ್ಲಿ ಯಾವುದೇ ಹಳೆಯ ರಕ್ಷಣೆ ಇರುವುದಿಲ್ಲ. ವೃದ್ಧಾಪ್ಯದಿಂದಲೋ, ಬೇರೆ ಕಾಯಿಲೆಗಳಿಂದಲೋ, ಕೆಲವು ಔಷಧಗಳ ಸೇವನೆಯಿಂದಲೋ ಶರೀರದ ರಕ್ಷಣೆಯ ವ್ಯವಸ್ಥೆಯ ಸಾಮರ್ಥ್ಯ ಕುಂದಿದ್ದರೆ, ಅಂತಹವರಲ್ಲಿ ಈ ಬದಲಾದ ವೈರಸ್ ತೀಕ್ಷ್ಣ ಕಾಯಿಲೆ ಉಂಟು ಮಾಡಿ ಪ್ರಾಣಾಪಾಯಕ್ಕೆ ಕಾರಣವಾಗಬಹುದು. ಅಪರೂಪಕ್ಕೆ ಆರೋಗ್ಯಕರ ವ್ಯಕ್ತಿಯಲ್ಲೂ ಈ ರೀತಿಯ ತೀಕ್ಷ್ಣ ಕಾಯಿಲೆ ಉಂಟಾಗುವ ಸಂಭವ ಇರುತ್ತದೆ. 

ವೈರಸ್ ಗಳಲ್ಲಿ ಈ ರೀತಿಯ ಜೆನೆಟಿಕ್ ಮಾರ್ಪಾಡು ಎಷ್ಟೋ ಶತಮಾನಗಳಿಂದಲೇ ಆಗುತ್ತಿದೆ. ಆದರೆ, ಶತಮಾನಗಳ ಹಿಂದೆ ಜಗತ್ತು ಇಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ. ಜನರ ಪ್ರಯಾಣ ವಿರಳವಾಗಿತ್ತು. ಹೆಚ್ಚೆಂದರೆ ದಿನಕ್ಕೆ ಕೆಲವು ಮೈಲಿಗಳಷ್ಟು ಸಂಚಾರ ಮಾತ್ರ ಸಾಧ್ಯವಾಗುತ್ತಿತ್ತು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚರಿಸುವ ಜನ ತೀರಾ ಕಡಿಮೆ ಇದ್ದರು. ಆದ್ದರಿಂದ, ಯಾವುದೇ ಒಂದು ಪ್ರದೇಶದಲ್ಲಿ ಈ ರೀತಿಯ ವೈರಸ್ ಸೋಂಕು ಉಂಟಾದರೆ, ಅದು ಬಾಧಿಸುತ್ತಿದ್ದ ಜನರ ಸಂಖ್ಯೆ ಮಿತಿಯಲ್ಲಿ ಇರುತ್ತಿತ್ತು. ಜೊತೆಗೆ, ಆಗಿನ ಕಾಲದಲ್ಲಿ ಜನರ ಆಯುಷ್ಯ ಕೂಡ ಕಡಿಮೆ ಇರುತ್ತಿತ್ತು. ಜನರು ಇಂತಹುದೇ ಕಾರಣದಿಂದ ಸಾಯುತ್ತಿದ್ದರು ಎಂದು ಪತ್ತೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. 

ಆದರೆ, ಈಗ ಕಾಲ ಬಹಳ ಬದಲಾಗಿದೆ. ಜನರ ಸರಾಸರಿ ಆಯಸ್ಸು ವೃದ್ಧಿಯಾಗಿದೆ. ಅದಕ್ಕೆ ತಕ್ಕಂತೆ ವೃದ್ಧಾಪ್ಯದಲ್ಲಿ ಬಾಧಿಸುವ ಕಾಯಿಲೆಗಳು ಹೆಚ್ಚಾಗಿವೆ; ಅಂತಹ ಬಹುತೇಕರಲ್ಲಿ ಶರೀರದ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಕುಂಠಿತವಾಗಿದೆ. ಜೊತೆಗೆ, ವಿಮಾನ ಸಂಚಾರದ ನೆರವಿನಿಂದ ಪ್ರಪಂಚದ ಯಾವುದೇ ಮೂಲೆಗಾದರೂ 24 ತಾಸುಗಳ ಅವಧಿಯೊಳಗೆ ಸೇರಬಹುದಾಗಿದೆ. ಇದು ನಮಗಷ್ಟೇ ಅಲ್ಲ; ರೋಗಾಣುಜೀವಿಗಳಿಗೂ ಅನುಕೂಲವಾಗಿದೆ. ಬದಲಾದ ವೈರಸ್ ಕಾಯಿಲೆ ಹೊತ್ತ ವ್ಯಕ್ತಿ ವಿಮಾನ ಪ್ರಯಾಣ ಮಾಡಿ ಬೇರೆ ದೇಶ ತಲುಪಿದರೆ, ಕೂಡಲೇ ಆ ಮಾರ್ಪಾಡಿತ ವೈರಸ್ ಬೇರೆ ದೇಶಗಳ ಪ್ರಜೆಗಳನ್ನೂ ಆಕ್ರಮಣ ಮಾಡಬಹುದು. ಹೀಗಾಗಿ, ಕೆಲವೇ ದಿನಗಳಲ್ಲಿ ಯಾವುದೇ ಹೊಸ ಮಾದರಿಯ ಕಾಯಿಲೆ ಜಗತ್ತಿನ ಯಾವುದೇ ಮೂಲೆಗಾದರೂ ವ್ಯಾಪಿಸಬಹುದು. ಇದು ಬಹಳ ಅಪಾಯಕಾರಿ ವಿದ್ಯಮಾನ. ಅದಕ್ಕೇ , ಚೀನಾದ ವುಹಾನ್ ನಗರದಲ್ಲಿ ಕಂಡ ಹೊಸ ವೈರಸ್ ಇಡೀ ಜಗತ್ತನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತದೆ. 

ಈಗೇನು ಮಾಡಬಹುದು? ವಿಶ್ವ ಆರೋಗ್ಯ ಸಂಸ್ಥೆ ಈ ರೀತಿಯ ಬೆಳವಣಿಗೆಯನ್ನು ಸದಾ ಗಮನಿಸುತ್ತದೆ. ದೇಶ-ಭಾಷೆಗಳ ಭೇಧವಿಲ್ಲದೆ ವೈದ್ಯ ವಿಜ್ಞಾನಿಗಳು ಮಾರ್ಪಾಡು ಹೊಂದಿದ ವೈರಸ್ ಗಳನ್ನು ಉದ್ದಗಲಕ್ಕೂ ವಿವೇಚಿಸಿ ಅದರ ಜೆನೆಟಿಕ್ ನಕ್ಷೆಯನ್ನು ತಯಾರಿಸುತ್ತಾರೆ. ಈಗಾಗಲೇ ಸಿದ್ಧವಿರುವ ಹಲವಾರು ವೈರಸ್-ನಾಶಕ ಔಷಧಗಳ ಪೈಕಿ ಯಾವ ಔಷಧ ಅದರ ಚಿಕಿತ್ಸೆಗೆ ಸಮಂಜಸವಾಗಿ ಹೊಂದಬಲ್ಲದು ಎಂದು ಔಷಧ ತಜ್ಞರು ನಿರ್ಧರಿಸುತ್ತಾರೆ. ಮಾರ್ಪಾಡು ಹೊಂದಿದ ವೈರಸ್ ಉತ್ಪಾದಿಸುವ ಪ್ರೊಟೀನ್ ಗಳಿಗೆ ಪ್ರತಿಯಾಗಿ ಲಸಿಕೆಗಳನ್ನು ಉತ್ಪಾದಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಪ್ರತಿಯೊಂದು ದೇಶಕ್ಕೂ “ಈ ವೈರಸ್ ನಿಮ್ಮ ದೇಶದಲ್ಲಿ ಕಾಣಿಸಿಕೊಂಡರೆ ಅದನ್ನು ಹೇಗೆ ಪತ್ತೆ ಮಾಡಬೇಕು ಮತ್ತು ಅದು ಹರಡದಂತೆ ಹೇಗೆ ನಿಯಂತ್ರಿಸಬೇಕು?” ಎಂಬ ಮಾರ್ಗಸೂಚಿಯನ್ನು ನೀಡುತ್ತದೆ. ಎಲ್ಲಾ ವೈದ್ಯರಿಗೂ ಆ ಸಲಹೆಗಳು ತಲುಪುವಂತೆ ಪ್ರಮುಖ ವೈದ್ಯಕೀಯ ಜಾಲತಾಣಗಳಲ್ಲಿ ಪ್ರಕಟಿಸಲಾಗುತ್ತದೆ. ಜೊತೆಗೆ, ಪ್ರತಿಯೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು ಹಾಗೂ ಹೆದ್ದಾರಿ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಪರೀಕ್ಷೆ ಮಾಡಿ ದೇಶದೊಳಗೆ ಬಿಡಲಾಗುತ್ತದೆ. ಯಾರಿಗಾದರೂ ಇಂತಹ ರೋಗದ ಸೂಚನೆ ಇದ್ದಲ್ಲಿ, ಅಂತಹವರನ್ನು ಕೆಲದಿನಗಳ ಕಾಲ ಪರಿವೀಕ್ಷಣೆಗೆ ಒಳಪಡಿಸಿ, ಕೂಲಂಕಷವಾಗಿ ಪರೀಕ್ಷಿಸಿ, ಕಾಯಿಲೆ ಇಲ್ಲವೆಂದು ಖಾತ್ರಿಯಾದಾಗ ಮಾತ್ರ ದೇಶದೊಳಗೆ ಬಿಡಲಾಗುತ್ತದೆ. ಹೀಗೆ, ಸಾಧ್ಯವಾದಷ್ಟೂ ಮುನ್ನೆಚ್ಚರಿಕೆ ವಹಿಸಿ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತದೆ. 

ಈಗ ಸದ್ಯದ ಆತಂಕಕ್ಕೆ ಕಾರಣವಾಗಿರುವ ವುಹಾನ್ ನ್ಯುಮೋನಿಯಾ ಕೂಡ ಇಂತಹುದೇ ಒಂದು ವೈರಸ್ ನ ಜೆನೆಟಿಕ್ ಮಾರ್ಪಾಡು ಎಂದು ಹೇಳಲಾಗಿದೆ. ಈ ಕಾಯಿಲೆ ಇರುವ ಒಬ್ಬರು ಮಹಿಳೆ ಮಾತ್ರ ಚೀನಾದಿಂದ ಥಾಯ್ಲ್ಯಾಂಡ್ ಗೆ ಪ್ರಯಾಣ ಮಾಡಿದ್ದಾರೆ. ಅದನ್ನು ಹೊರತುಪಡಿಸಿ, ಸದ್ಯಕ್ಕೆ ಈ ಕಾಯಿಲೆ ಬೇರೆ ದೇಶಗಳಿಗೆ ತಲುಪಿರುವ ಸೂಚನೆ ಇಲ್ಲ. ಆದರೂ, ನಮ್ಮ ನಿಗಾ ನಮಗೆ ಇರಲೇಬೇಕು. ಜ್ವರ, ಸುಸ್ತು, ಒಣ ಕೆಮ್ಮು, ಉಸಿರಾಟದ ಸಮಸ್ಯೆಗಳು ಕಂಡು ಬಂದರೆ ಕೂಡಲೇ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ. “ಇಡೀ ಜಗತ್ತು ಒಂದೇ ಮನೆ” ಎನ್ನುವ ಈ ಕಾಲದಲ್ಲಿ ಮನೆಯ ಎಲ್ಲಾ ಸದಸ್ಯರೂ ಜಾಗೃತರಾಗಿಯೇ ಇರಬೇಕು. 
---------------
18/1/2020 ವಿಶ್ವವಾಣಿ ಕನ್ನಡ ದಿನಪತ್ರಿಕೆಯಲ್ಲಿ ಲೇಖನ  http://epaper.vishwavani.news/bng/e/bng/18-01-2020/7
ಆಡಿಯೋ ಆವೃತ್ತಿಯ ಕೊಂಡಿ: https://anchor.fm/kollegala/episodes/122-ea7e97


ಗುರುವಾರ, ಜನವರಿ 16, 2020

ರಕ್ತ ಕೆಂಪು ಬಣ್ಣದಲ್ಲೇ ಇರಬೇಕೆ?!
ಲೇಖಕ: ಡಾ. ಕಿರಣ್ ವಿ ಎಸ್
ವೈದ್ಯರು
“ಬೆನ್ನುಮೂಳೆ ಇರುವ ಎಲ್ಲಾ ಪ್ರಾಣಿಗಳಲ್ಲೂ ರಕ್ತದ ಬಣ್ಣವನ್ನು ಕೆಂಪು ಮಾಡುವ ಹಿಮೋಗ್ಲೋಬಿನ್ ಇದೆ. ಹಿಮೋಗ್ಲೋಬಿನ್ ಇಲ್ಲದ ರಕ್ತಕ್ಕೆ ಬಣ್ಣ ಇರುವುದಿಲ್ಲ” ಎಂದು ಶಾಲೆಯ ಪುಸ್ತಕಗಳು ಹೇಳುತ್ತವೆ. ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ನೇ ಏಕಿರಬೇಕು? ಬೇರೆ ಬಣ್ಣ ಕೊಡುವ ವಸ್ತುಗಳು ಏಕಿರಬಾರದು? ಹೀಗೊಂದು ಕುತೂಹಲಕಾರಿ ಪ್ರಶ್ನೆ ಮೂಡಿದ್ದು ತೀರಾ ಇತ್ತೀಚೆಗೆ.

ದಕ್ಷಿಣಧ್ರುವದ ಅಂಟಾರ್ಕ್ಟಿಕಾದ ಅತ್ಯಂತ ಶೀತಲ ನೀರಿನಲ್ಲಿ ವಾಸಿಸುವ ಐಸ್-ಫಿಶ್ ಎಂಬ ಮೀನಿದೆ. ಸಾಮಾನ್ಯ ಮೀನುಗಳಿಗಿಂತ ಇವುಗಳ ಮೈ ಅತೀ ನುಣುಪು; ಮೂಳೆಗಳು ಪಾರದರ್ಶಕ. ಗಾಜಿನಬೊಂಬೆಯಂತಹ ಈ ಮೀನುಗಳ ರಕ್ತ ಸಂಪೂರ್ಣ ಬಿಳಿ. ಬೆನ್ನುಮೂಳೆ ಇರುವ ಪ್ರಾಣಿಗಳ ಪೈಕಿ ಕೆಂಪು ಬಣ್ಣದ ರಕ್ತ ಇಲ್ಲದ ಏಕೈಕ ಜೀವಿ ಈ ಐಸ್-ಫಿಶ್. ಇವುಗಳ ರಕ್ತದಲ್ಲಿ ಕೆಂಪು ರಕ್ತಕಣಗಳಾಗಲೀ, ಹಿಮೋಗ್ಲೋಬಿನ್ ಆಗಲೀ ಇಲ್ಲ. ಈ ವಿಶಿಷ್ಟ ಮೀನು ತನ್ನ ದೊಡ್ಡ ಗಾತ್ರದ ಕಿವಿರುಗಳಿಂದ, ನುಣುಪಾದ ಚರ್ಮದಿಂದ ಆಕ್ಸಿಜನ್ ಅನ್ನು ಸೀದಾ ಸೆಳೆದುಕೊಳ್ಳುತ್ತದೆ.
ಹಿಮೋಗ್ಲೋಬಿನ್ ಇಲ್ಲದೆ ಜೀವಿಸುವ ಸಾಮರ್ಥ್ಯ ಇದಕ್ಕೆ ಬಂದದ್ದಾದರೂ ಹೇಗೆ? ಹಿಮೋಗ್ಲೋಬಿನ್ ಜೀವವಿಕಾಸದ ಯಾವ ಹಂತದಲ್ಲಿ ಜೀವಿಗಳನ್ನು ಸೇರಿತು? ಇಂತಹ ಪ್ರಶ್ನೆಗಳನ್ನು ಐಸ್-ಫಿಶ್ ವಿಜ್ಞಾನಿಗಳಲ್ಲಿ ಹುಟ್ಟುಹಾಕಿತು! ಅವಕ್ಕೆ ವಿಜ್ಞಾನಿಗಳು ಕೆಲವು ರೋಚಕ ಉತ್ತರಗಳನ್ನೂ ಪಡೆದಿದ್ದಾರೆ.

ಮೊದಲು ವಿಜ್ಞಾನಿಗಳು ಐಸ್-ಫಿಶ್ ಜೆನೆಟಿಕ್ ರಚನೆಯನ್ನು ಗಮನಿಸಿದರು. ಕೆಂಪು ರಕ್ತ ಹೊಂದಿರುವ ಇತರ ಮೀನುಗಳ ಜೆನೆಟಿಕ್ ರಚನೆಯ ಜೊತೆಗೆ ಐಸ್-ಫಿಶ್ ಅನ್ನು ಹೋಲಿಸಿದಾಗ ಹೆಚ್ಚು ವ್ಯತ್ಯಾಸಗಳು ಕಂಡುಬರಲಿಲ್ಲ. ಆದರೆ, ಕೋಶಗಳಿಗೆ ಆಕ್ಸಿಜನ್ ಸುಲಭವಾಗಿ ಒಯ್ಯಬಲ್ಲ, ಮುಕ್ತ-ಆಕ್ಸಿಜನ್ ನಿಂದ ಆಗಬಹುದಾದ ಅಪಾಯ ತಡೆಯಬಲ್ಲ ಕೆಲವು ಕಿಣ್ವಗಳು ಐಸ್-ಫಿಶ್ ನಲ್ಲಿ ಅಧಿಕವಾಗಿದ್ದವು. ಅಂದರೆ, ಹಿಮೋಗ್ಲೋಬಿನ್ ತಯಾರಿಸಬಲ್ಲ ಜೀನ್ ಗಳು ಐಸ್-ಫಿಶ್ ನಲ್ಲಿ ಇದ್ದರೂ ನಿಷ್ಕ್ರಿಯವಾಗಿದ್ದವು. ಇನ್ಯಾವ ಜೀವಿಗಳಲ್ಲಿ ಹೀಗೆಯೇ ಇರಬಹುದು ಎಂದು ವಿಜ್ಞಾನಿಗಳು ಯೋಚಿಸಿದರು. ಬೆನ್ನುಮೂಳೆ ಇಲ್ಲದ, ಕೆಂಪು ರಕ್ತದ ಸುಳಿವೇ ಇಲ್ಲದ ಹಲವಾರು ಪ್ರಾಥಮಿಕ ಜೀವಿಗಳಲ್ಲಿ ಕೂಡ ಹಿಮೋಗ್ಲೋಬಿನ್ ತಯಾರಿಸಬಲ್ಲ ಜೀನ್ ಗಳು ಕಂಡುಬಂದವು. ಏಡಿಯಂತಹ ಕೆಲವು ಜೀವಿಗಳಲ್ಲಿ ಹೀಮೊಗ್ಲೋಬಿನ್ ಬದಲಿಗೆ ರಕ್ತಕ್ಕೆ ನೀಲಿ ಬಣ್ಣ ನೀಡುವ ಹೀಮೋಸೈನಿನ್ ಎಂಬ ವಸ್ತು ಇರುತ್ತದೆ. ಇಂತಹ ಜೀವಿಗಳಲ್ಲೂ ಹಿಮೋಗ್ಲೋಬಿನ್ ಉತ್ಪಾದಿಸಬಲ್ಲ ಜೀನ್ ಗಳು ಇದ್ದವು! ಬೇಕಿಲ್ಲದ ವಸ್ತುಗಳನ್ನು ಉತ್ಪಾದಿಸಬಲ್ಲ ಜೀನ್ ಗಳು ಏಕಿರಬೇಕು ಎಂಬುದು ವಿಜ್ಞಾನಿಗಳ ಕುತೂಹಲ. 

ಉತ್ತರ ಹುಡುಕುತ್ತಾ ಹೊರಟ ವಿಜ್ಞಾನಿಗಳು ತಲುಪಿದ್ದು ಜೀವವಿಕಾಸದ ಆರಂಭದ ಹಂತಗಳನ್ನು. ಅಮೀಬಾದಂತಹ ಏಕಕೋಶಜೀವಿಗಳಲ್ಲಿ ಕೂಡ ಆಕ್ಸಿಜನ್ ಬಳಸಿಕೊಂಡು ಹಲವಾರು ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತವೆ. ಆಕ್ಸಿಜನ್  ಹಿಡಿದಿಟ್ಟುಕೊಳ್ಳಲು ಪಾರ್-ಫಯ್ರಿನ್ ಎಂಬ ವರ್ತುಲಾಕಾರದ ವಿಶಿಷ್ಟ ರಾಸಾಯನಿಕವನ್ನು ಏಕಾಣುಜೀವಿಗಳು ಸೇರಿಸಿಕೊಂಡವು. ಪಾರ್-ಫಯ್ರಿನ್ ವರ್ತುಲದ ಒಳಗೆ ಕಬ್ಬಿಣ ಅಥವಾ ತಾಮ್ರದಂತಹ ಖನಿಜ ಸೇರಿದಾಗ ಆಕ್ಸಿಜನ್ ಹಿಡಿದಿಟ್ಟುಕೊಳ್ಳುವ ಶಕ್ತಿ ತುಂಬಾ ಹೆಚ್ಚುತ್ತದೆ. ಇಂತಹ ಖನಿಜ-ಪಾರ್-ಫಯ್ರಿನ್ ಸಂಯುಕ್ತದಿಂದ ಏಕಕೋಶಜೀವಿಗಳಲ್ಲಿ ಆಕ್ಸಿಜನ್ ಬಳಕೆ ಹೆಚ್ಚಾಯಿತು. ಕಾಲ ಕಳೆಯುತ್ತಾ ಏಕಕೋಶಜೀವಿಗಳು ಬಹುಕೋಶಜೀವಿಗಳಾಗುವಲ್ಲಿ ಈ ಖನಿಜ-ಪಾರ್-ಫಯ್ರಿನ್ ಸಂಯುಕ್ತ ದೊಡ್ಡ ಪಾತ್ರ ವಹಿಸಿರಬೇಕು. ಆದರೆ ಪಾರ್-ಫಯ್ರಿನ್ ಗಳ ಕೆಲಸ ಒಂದಿಷ್ಟು ಏರುಪೇರಾದರೂ ಮುಕ್ತ ಆಕ್ಸಿಜನ್ ಬಿಡುಗಡೆಯಾಗಿ ಕೋಶದಲ್ಲಿ ಓಡಾಡಿ ಹಾವಳಿ ಮಾಡುತ್ತಿತ್ತು. ಹಾಗಾಗಿ, ಪಾರ್-ಫಯ್ರಿನ್ ಸುತ್ತ ಪ್ರೋಟೀನ್ ಗೋಡೆ ಬೆಳೆಯಿತು. ಹಿಮೋಗ್ಲೋಬಿನ್ ಕೂಡ ಇಂತಹ ಸಂಯುಕ್ತವೇ. ಇದರಲ್ಲಿ ಹೀಮ್ ಎನ್ನುವ ಕಬ್ಬಿಣ-ಪಾರ್-ಫಯ್ರಿನ್ ಸುತ್ತಾ ಗ್ಲೋಬಿನ್ ಎನ್ನುವ ಪ್ರೋಟೀನಿನ ಗೋಡೆಯಿದೆ. ಹಿಮೋಗ್ಲೋಬಿನ್ ಅಣುಗಳು ಒಂದರ ಜೊತೆಗೆ ಮತ್ತೊಂದು ಬೆಸೆದುಕೊಂಡು ಆಕ್ಸಿಜನ್ ಸರಬರಾಜನ್ನು ಮತ್ತಷ್ಟು ಸಮರ್ಥಗೊಳಿಸಬಲ್ಲವು. ಜೀವವಿಕಾಸದ ಆರಂಭದಿಂದ ಇದೊಂದು ಉಪಯುಕ್ತ ಸಂಯುಕ್ತ ಎಂದು ನಿಸರ್ಗಕ್ಕೆ ಅನಿಸಿರಬೇಕು. ಹಾಗಾಗಿ ಹಿಮೋಗ್ಲೋಬಿನ್ ತಯಾರಿ ಮಾಡುವ ಜೀನ್ ಗಳನ್ನು ಪ್ರಕೃತಿ ನಾಶ ಮಾಡದೇ ಅದನ್ನು ಎಲ್ಲಾ ರೀತಿಯ ಜೀವಿಗಳಲ್ಲೂ ಉಳಿಸಿರಬೇಕು ಎಂದು ವಿಜ್ಞಾನಿಗಳ ಅಂದಾಜು.

ಬಹುಕೋಶಜೀವಿಗಳ ವಿಕಾಸವಾದಂತೆಲ್ಲಾ ಹಲವಾರು ಪದರಗಳ ಕೋಶಗಳು ಬೆಳೆದವು. ಆಗ ಒಳಪದರಗಳ ಕೋಶಗಳಿಗೆ ವಾತಾವರಣದ ನೇರ ಸಂಪರ್ಕ ಇಲ್ಲದಾಯಿತು. ಅಂತಹ ಸಂದರ್ಭದಲ್ಲಿ ನೆರವಿಗೆ ಬಂದದ್ದು ಹಿಮೋಗ್ಲೋಬಿನ್. ತನ್ನ ಮಡಿಲಲ್ಲಿ ಆಕ್ಸಿಜನ್ ತುಂಬಿಕೊಂಡ ಹಿಮೋಗ್ಲೋಬಿನ್ ಅಂಚೆಯಣ್ಣನ ಹಾಗೆ ಒಳಪದರಗಳ ಕೋಶಗಳಿಗೆ ಅದನ್ನು ಒಯ್ಯುತ್ತಿತ್ತು. ಆಕ್ಸಿಜನ್ ಸಮಸ್ಯೆಗೆ ಪರಿಹಾರ ದೊರೆತದ್ದರಿಂದ ಕೋಶಗಳ ಸಂಖ್ಯೆ, ಪದರಗಳು ಹೆಚ್ಚುತ್ತಲೇ ಹೋದವು; ಅಂಗಾಂಗಗಳು ಬೆಳೆದವು; ಬಹುಕೋಶಜೀವಿಗಳು ಕಾಲಾಂತರದಲ್ಲಿ ಬಹು-ಅಂಗಗಳ ಜೀವಿಗಳಾದವು. 

ಆಕ್ಸಿಜನ್ ಹೇರಳವಾಗಿದ್ದಾಗ ಮಾತ್ರ ಹಿಮೋಗ್ಲೋಬಿನ್ ಕೆಲಸದ ಸಾಮರ್ಥ್ಯ ಚೆನ್ನಾಗಿರುತ್ತದೆ. ಕಡಿಮೆ ಆಕ್ಸಿಜನ್ ಇರುವಲ್ಲಿ ಅದರ ಕೆಲಸ ಅಷ್ಟಕ್ಕಷ್ಟೇ! ಆಕ್ಸಿಜನ್ ಮಟ್ಟ ಕಡಿಮೆ ಇರುವ ಆಳಸಮುದ್ರದ ಪರಿಸ್ಥಿತಿಗಳಲ್ಲಿ ವಾಸಿಸುವ ಆಕ್ಟೋಪಸ್ ನಂತಹ ಜೀವಿಗಳಲ್ಲಿ ಹಿಮೋಗ್ಲೋಬಿನ್ ಬದಲಿಗೆ ರಕ್ತದಲ್ಲಿ ನೇರವಾಗಿ ಕರಗಬಲ್ಲ ನೀಲಿಬಣ್ಣದ ಹಿಮೋಸೈನಿನ್ ಇರುತ್ತದೆ. ಅನೇಕ ಬಗೆಯ ಕೀಟಗಳಂತೂ ಇವುಗಳ ಹಂಗೇ ಬೇಡ ಎನ್ನುವಂತೆ ಶರೀರದೊಳಗೆ ಗಾಳಿಕೊಳವೆಗಳನ್ನು ನಿರ್ಮಿಸಿಕೊಂಡು ಸೀದಾ ಅಂಗಾಂಗಗಳಿಗೆ ಆಕ್ಸಿಜನ್ ತಲುಪಿಸುತ್ತವೆ! 

ಜೀವಿಗಳಿಗೆ ಎಷ್ಟೇ ಪ್ರಯೋಜನಕಾರಿಯಾದರೂ ಹಿಮೋಗ್ಲೋಬಿನ್ ಅಪಾಯಕಾರಿ ಸಂಯುಕ್ತ! ಪಾರ್-ಫಯ್ರಿನ್ ಮೂಲತಃ ಶರೀರದ ಸಹಜ ರಾಸಾಯನಿಕವಲ್ಲ. ನಿಸರ್ಗ ಪಾರ್-ಫಯ್ರಿನ್ ನ ಉಪಯುಕ್ತತೆ ಕಂಡು ಅದನ್ನು ಏಕಕೋಶಜೀವಿಯೊಳಗೆ ಸೇರಿಸಿದ್ದು. ಹಾಗಾಗಿ, ಪಾರ್-ಫಯ್ರಿನ್ ಅನ್ನು ಮುಕ್ತವಾಗಿ ಬಿಟ್ಟಾಗ ಅದು ಶರೀರದ ಅಂಗಗಳಿಗೆ ಘಾಸಿ ಮಾಡಬಹುದು. ಅದಕ್ಕೇ ನಮ್ಮ ಶರೀರ ಪಾರ್-ಫಯ್ರಿನ್ ಸುತ್ತಾ ಗ್ಲೋಬಿನ್ ಕೋಟೆ ಕಟ್ಟಿ, ಹಿಮೋಗ್ಲೋಬಿನ್ ಅನ್ನು ಕೆಂಪು ರಕ್ತಕಣಗಳ ಒಳಗೆ ಜೋಪಾನವಾಗಿ ಬಂಧಿಸಿಟ್ಟಿದೆ. ಕೆಂಪು ರಕ್ತಕಣಗಳು ಸುಮಾರು 120 ದಿನಗಳ ಕಾಲ ಕೆಲಸ ಮಾಡುತ್ತವೆ. ಅವು ಒಡೆದಾಗ ಹೀಮ್ ಮತ್ತು ಗ್ಲೋಬಿನ್ ಬೇರೆಬೇರೆ ಆಗುತ್ತವೆ. ಮುಕ್ತ ಹೀಮ್ ಅಪಾಯಕಾರಿಯಾದ್ದರಿಂದ ಯಕೃತ್ತು ಹ್ಯಾಪ್ಟೋಗ್ಲೋಬಿನ್ ಎಂಬ ವಿಶೇಷ ರಾಸಾಯನಿಕ ಬಳಸಿ ಹೀಮ್ ಅನ್ನು ಜೋಪಾನವಾಗಿ ಬಂಧಿಸಿ, ಅದನ್ನು ಬಿಲಿವರೆಡಿನ್ ಎಂಬ ಹಸಿರು ರಾಸಾಯನಿಕವನ್ನಾಗಿ ಬದಲಾಯಿಸಿ ಶರೀರದಿಂದ ಹೊರಹಾಕುತ್ತದೆ. ಈ ಕೆಲಸ ಏನಾದರೂ ಏರುಪೇರಾದರೆ ಮುಕ್ತ ಹೀಮ್ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗೆ, ಉಪಯುಕ್ತವಾದರೂ ಅಪಾಯಕಾರಿಯಾದ ಹೀಮ್ ಅನ್ನು ಪ್ರೋಟೀನ್ ಗೋಡೆಯೊಳಗೆ ಬಂಧಿಸಿ, ಅದನ್ನು ಕೆಂಪು ರಕ್ತಕಣಗಳ ಕೋಟೆಯಲ್ಲಿ ಸುರಕ್ಷಿತವಾಗಿ ಇಟ್ಟ ಪ್ರಕೃತಿಯ ವಿನ್ಯಾಸ ವಿಸ್ಮಯಕಾರಿ; ರಾಕ್ಷಸನನ್ನು ತನ್ನ ಅಂಕೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದ ಮಂತ್ರವಾದಿಯ ಕತೆಯಂತೆ!

ನ್ಯೂಗಿನಿ ಪ್ರಾಂತದ ಕೆಲವು ಹಲ್ಲಿಗಳ ರಕ್ತದ ಬಣ್ಣ ಕಡುಹಸಿರು! ಅವುಗಳ ರಕ್ತದಲ್ಲಿ ಹಿಮೋಗ್ಲೋಬಿನ್ ಬದಲಿಗೆ ಬಿಲಿವರೆಡಿನ್ ಇರುವುದನ್ನು ಜೀವವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಬಿಲಿವರೆಡಿನ್ ಗೆ ಆಕ್ಸಿಜನ್ ಒಯ್ಯುವ ಸಾಮರ್ಥ್ಯವೇ ಇಲ್ಲ! ಹೀಗಿದ್ದರೂ ಬಿಲಿವರೆಡಿನ್ ಅನ್ನು ಅವುಗಳ ಶರೀರ ಏಕೆ ಉಳಿಸಿಕೊಂಡಿದೆ ಎಂದು ತಿಳಿಯದು! ಪ್ರಾಯಶಃ ಆ ಪ್ರಾಂತ್ಯದ ಯಾವುದೋ ಸೋಂಕಿನಿಂದ ಆ ಹಲ್ಲಿಗಳನ್ನು ಬಿಲಿವರೆಡಿನ್ ಕಾಪಾಡುತ್ತದೆ ಎಂದು ಅಂದಾಜು.

ಒಟ್ಟಿನಲ್ಲಿ, ಅಂಟಾರ್ಕ್ಟಿಕದ ಐಸ್-ಫಿಶ್ ರಕ್ತದಲ್ಲಿ ಹಿಮೋಗ್ಲೋಬಿನ್ ಏಕಿಲ್ಲ ಎಂಬ ಪ್ರಶ್ನೆಯ ಬೆನ್ನು ಹತ್ತಿದ ವಿಜ್ಞಾನಿಗಳು ಜೀವವಿಕಾಸದ ಪರ್ಯಟನೆ ಮಾಡಬೇಕಾಯಿತು. ಇಷ್ಟಾಗಿಯೂ, ಐಸ್-ಫಿಶ್ ನಲ್ಲಿ ಹಿಮೋಗ್ಲೋಬಿನ್ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರವಂತೂ ದೊರಕಲೇ ಇಲ್ಲ. ಪ್ರಾಯಶಃ ವಿಕಾಸದ ಯಾವುದೋ ಹಂತದಲ್ಲಿ ಜೆನೆಟಿಕ್ ಅಪಘಾತದಿಂದ ಐಸ್-ಫಿಶ್ ಗಳಲ್ಲಿ ಹಿಮೋಗ್ಲೋಬಿನ್ ಉತ್ಪಾದಿಸುವ ಪ್ರಕ್ರಿಯೆಗೆ ಅಡೆತಡೆ ಆಗಿದ್ದಿರಬಹುದು. ಆದರೆ, ಆ ಪ್ರದೇಶದ ಅತ್ಯಂತ ಶೀತಲ ನೀರಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಆಕ್ಸಿಜನ್ ಕರಗಿರುತ್ತದೆ. ಹೀಗಾಗಿ, ಐಸ್-ಫಿಶ್ ಗಳು ಕಿವಿರುಗಳ ಗಾತ್ರವನ್ನು ಹಿಗ್ಗಿಸಿ, ಚರ್ಮವನ್ನು ಮತ್ತಷ್ಟು ನುಣುಪಾಗಿಸಿ ಅವುಗಳ ಮೂಲಕವೇ ಆಕ್ಸಿಜನ್ ಅನ್ನು ನೇರವಾಗಿ ಹೀರಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರಬೇಕು. ಜೀವಿಯ ಒಡಲಿಗೆ ಆಕ್ಸಿಜನ್ ತಲುಪಿಸುವುದು ಪ್ರಕೃತಿಯ ಧ್ಯೇಯ. ಅದಕ್ಕೆ ಹೀಮ್ ಎಂಬ ಅಪಾಯಕಾರಿ ಸಂಯುಕ್ತದ ನೆರವು ಪಡೆಯಬೇಕಿತ್ತು. ಈ ಪ್ರಸಂಗದಲ್ಲಿ ಐಸ್-ಫಿಶ್ ಹೀಮ್ ನ ಹಂಗಿಲ್ಲದೇ ಆಕ್ಸಿಜನ್ ಸರಬರಾಜನ್ನು ಪೂರೈಸಿಕೊಂಡದ್ದು ನಿಸರ್ಗಕ್ಕೆ ಭಲೇ ಎನಿಸಿರಬೇಕು. ಅಧಿಕ ಸಾಮರ್ಥ್ಯದ ಅಪಾಯಕಾರಿ ಪ್ರಕ್ರಿಯೆ ಮತ್ತು ಕಡಿಮೆ ಸಾಮರ್ಥ್ಯದ ನಿರಪಾಯಕಾರಿ ಕೆಲಸಗಳ ನಡುವೆ ಪ್ರಕೃತಿ ಕಡಿಮೆ ಅಪಾಯವನ್ನೇ ಆಯ್ದುಕೊಳ್ಳುತ್ತದೆ ಎಂಬ ವಿಜ್ಞಾನಿಗಳ ವಾದಕ್ಕೆ ಐಸ್-ಫಿಶ್ ಮತ್ತಷ್ಟು ಇಂಬು ಕೊಟ್ಟಿದೆ. ಇಷ್ಟಾಗಿಯೂ, ನಿಸರ್ಗ ಅವುಗಳ ದೇಹದಿಂದ ಹಿಮೋಗ್ಲೋಬಿನ್ ಉತ್ಪಾದಿಸುವ ಜೀನ್ ಗಳನ್ನು ಮರೆ ಮಾಡಿಲ್ಲ. ಪ್ರಕೃತಿಯ ಆಲೋಚನೆಯನ್ನು ಮನುಷ್ಯ ಬುದ್ಧಿ ಅಲ್ಪಸ್ವಲ್ಪ ಅರ್ಥ ಮಾಡಿಕೊಳ್ಳಬಹುದು; ಆದರೆ, ಅದರ ಅಗಾಧ ಸಾಮರ್ಥ್ಯವನ್ನು ಸಂಪೂರ್ಣವಾಗಿ ಗ್ರಹಿಸಿವುದು ಸಾಧ್ಯವಿಲ್ಲದ ಮಾತು!
------------------

13 ಜನವರಿ 2020 ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. (http://epaper.hosadigantha.com/epaper/m/238419/5e1b56b02136b)
ಆಡಿಯೋ ಕೊಂಡಿ: https://anchor.fm/kollegala/episodes/118-22-e9i8uh