ಗುರುವಾರ, ಫೆಬ್ರವರಿ 8, 2018

ನಮ್ಮ ಕೈಗಳು ನಮ್ಮ ಕಾಲುಗಳನ್ನೇ ಕತ್ತರಿಸಿದರೆ ನಷ್ಟ ದೇಹಕ್ಕೆ ತಾನೇ?



ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ವೈದ್ಯಕೀಯ ನಿಯಂತ್ರಣ ಮಂಡಳಿ ಒಂದು ಪ್ರತಿಷ್ಟಿತ ಆಸ್ಪತ್ರೆಗೆ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ರೋಗಿಯೊಬ್ಬರ ಕುಟುಂಬಕ್ಕೆ ನೀಡುವಂತೆ ಆಜ್ಞಾಪಿಸಿತ್ತು. ಈ ಪರಿಹಾರಕ್ಕೆ ಮಂಡಳಿ ನೀಡಿದ ಕಾರಣಗಳು ವ್ಯಾಪಕ ಚರ್ಚೆಗೆ ಒಳಗಾಗುತ್ತಿವೆ. ಅಲ್ಲದೆ ನಮ್ಮ ದೇಶದ ವೈದ್ಯಕೀಯ (ಅ)ವ್ಯವಸ್ಥೆಯ ಹುಳುಕುಗಳನ್ನೂ ಎತ್ತಿ ತೋರಿಸುತ್ತಿದೆ.

ಇದರ ಹಿನ್ನೆಲೆ ಹೀಗಿದೆ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಯೊಬ್ಬರು ಎದೆನೋವು ಮತ್ತು ಉಸಿರಾಟದ ಸಮಸ್ಯೆಯಿಂದ ಕೊಲ್ಕತಾದ ಪ್ರತಿಷ್ಟಿತ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ನಾಲ್ಕು ದಿನಗಳ ನಂತರ ಮರಣ ಹೊಂದಿದ್ದರು. ಮೃತ ವ್ಯಕ್ತಿಯ ಸಂಬಂಧಿಗಳು ಆಸ್ಪತ್ರೆಯ ಕಡೆಯಿಂದ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯವಾಗಿದೆ ಎಂದು ಆರೋಪಿಸಿ ಮಂಡಳಿಗೆ ದೂರು ನೀಡಿದ್ದರು. ಆ ದೂರನ್ನು ಪರಿಶೀಲಿಸಿದ ಮಂಡಳಿ, ಆ ರೋಗಿಗೆ ಹೃದಯದ ಸ್ಕ್ಯಾನಿಂಗ್ ಮಾಡಿದ ವೈದ್ಯರ ವಿದ್ಯಾರ್ಹತೆಯನ್ನು ಪ್ರಶ್ನಿಸಿದೆ. ಆ ವೈದ್ಯರು ರಷ್ಯಾ ದೇಶದಲ್ಲಿ ಎಂ ಡಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಎರಡು ವರ್ಷಗಳ ಕಾಲ ಹೃದಯದ ರೋಗಗಳ ವಿಷಯದಲ್ಲಿ ತರಬೇತಿ ಪಡೆದು ಡಿಪ್ಲೋಮಾ ಪದವಿ ಪಡೆದಿದ್ದಾರೆ. ಈ ರೋಗಿಗೆ ಅವರು ಕೇವಲ ಹೃದಯದ ಸ್ಕ್ಯಾನಿಂಗ್ ಮಾಡಿದ್ದಾರೆಯೇ ವಿನಃ ಅವರು ಖುದ್ದು ಯಾವುದೇ ಚಿಕಿತ್ಸೆ ನೀಡಿಲ್ಲ. ರೋಗಿಗೆ ಚಿಕಿತ್ಸೆ ನೀಡಿರುವುದು ಇನ್ನೊಬ್ಬ ಹೃದಯ ರೋಗಗಳ ತಜ್ಞರು.

ಮಂಡಳಿಯ ಹೇಳಿಕೆಯಂತೆ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಡಿಪ್ಲೋಮಾ ಭಾರತೀಯ ವೈದ್ಯಕೀಯ ಮಂಡಳಿಯಿಂದ (Medical Council of India) ಮಾನ್ಯತೆ ಪಡೆದಿಲ್ಲವಾದ್ದರಿಂದ ಆ ವೈದ್ಯರು ಹೃದಯದ ಸ್ಕ್ಯಾನಿಂಗ್ ಮಾಡಲು ಅರ್ಹರಲ್ಲ. ಇದರಿಂದ ರೋಗಿಯ ಚಿಕಿತ್ಸೆಯ ಮೇಲೆ ಪ್ರತಿಕೂಲ ಪರಿಣಾಮ ಆಗಿರಲು ಸಾಧ್ಯವೆಂದೂ, ಆಸ್ಪತ್ರೆಯು ಈ ರೀತಿ ಅನೈತಿಕ ಮತ್ತು ಅತಾರ್ಕಿಕ ರೀತಿಯಲ್ಲಿ ಚಿಕಿತ್ಸೆ ನೀಡಿದೆ ಎಂದು ಮಂಡಳಿ ಅಭಿಪ್ರಾಯ ಪಟ್ಟಿದೆ. ಆ ಮೂಲಕ ಆಸ್ಪತ್ರೆಗೆ ಇಪ್ಪತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.

ಮಂಡಳಿಯ ಈ ನಿರ್ಧಾರ ಜೇನುಗೂಡಿಗೆ ಕೈ ಇಟ್ಟಂತೆ ಆಗಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸ್ವಯಂ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇರುವ ಸಂಸ್ಥೆ. ಅಂತಹ ವಿಶ್ವವಿದ್ಯಾಲಯದಿಂದ ನಿಯತವಾಗಿರುವ ರೀತಿಯಲ್ಲಿ ಎರಡು ವರ್ಷ ವ್ಯಾಸಂಗ ಮಾಡಿ ಪಡೆದ ಡಿಪ್ಲೊಮಾ, ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಮತ್ತೊಂದು ಸಂಸ್ಥೆಯಾದ ಭಾರತೀಯ ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಪಡೆಯುವುದಿಲ್ಲ ಎಂದರೆ ತಪ್ಪು ಯಾರದು? ಸರ್ಕಾರ ಇಂತಹ ಮಾನ್ಯತೆ ಇಲ್ಲದ ಕೋರ್ಸ್ ಗಳನ್ನು ನಡೆಸಿ ವಿದ್ಯಾರ್ಥಿಗಳ ಎರಡು ವರ್ಷದ ಅಧ್ಯಯನವನ್ನು ಮಣ್ಣು ಪಾಲು ಮಾಡಿ ಅವರಿಗೆ ಮುಖಭಂಗ ಏಕೆ ಮಾಡಬೇಕು? ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಯೊಂದು ತನ್ನ ಒಣ ಪ್ರತಿಷ್ಠೆಯನ್ನು ಮುಂದೆ ಇಟ್ಟುಕೊಂಡು ಮಾನ್ಯತೆ ನೀಡುವ ವಿಷಯದಲ್ಲಿ ದರ್ಪ ತೋರಿದರೆ ಅದಕ್ಕೆ ಯಾರು ಹೊಣೆ? ವಿದ್ಯಾರ್ಥಿಗಳು ಹಣವನ್ನೂ, ಸಮಯವನ್ನೂ, ಶ್ರಮವನ್ನೂ ವ್ಯಯಿಸಿ ಅಧ್ಯಯನ ಮಾಡಬೇಕು; ಆದರೆ ತೇರ್ಗಡೆಯಾದ ನಂತರ ಅದಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡಬಾರದು ಎಂದರೆ ಇದಕ್ಕಿಂತ ಅತಾರ್ಕಿಕ ಅಧ್ವಾನ ಇರಲಾರದು.

ಈ ರೀತಿಯ ಅರ್ಥಹೀನ ಕೆಲಸಗಳಿಗೆ ನಮ್ಮ ದೇಶದಲ್ಲಿ ಕೊನೆ-ಮೊದಲಿಲ್ಲ. ರಾಷ್ಟ್ರೀಯ ಪರೀಕ್ಷಾ ಮಂಡಳಿ (National Board of Examinations) ಎನ್ನುವ ಸ್ವಾಯತ್ತ ವೈದ್ಯಕೀಯ ಸಂಸ್ಥೆಯೊಂದು ನಮ್ಮ ದೇಶದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿ ನಿಯೋಜಿತವಾಗಿದೆ. ವೈದ್ಯಕೀಯ ಸ್ನಾತಕೋತ್ತರ ಹಾಗೂ ಅದಕ್ಕಿಂತ ಹೆಚ್ಚಿನ ಮಟ್ಟದ ಪದವಿಗಳ ಅಧ್ಯಯನ ಈ ಮಂಡಳಿಯ ಅಧಿನಿಯಮದಲ್ಲಿದೆ. ಈ ಮಂಡಳಿ ನೀಡುವ ಇಂತಹ ಪದವಿಗಳನ್ನು ರಾಷ್ಟ್ರೀಯ ಮಂಡಳಿಯ ಡಿಪ್ಲೋಮಾ (DNB) ಎಂದು ಕರೆಯಲಾಗುತ್ತದೆ. ಈ ಡಿಪ್ಲೊಮಾಗಳು ಎಂ ಸಿ ಐ ನೀಡುವ ಎಂ ಡಿ ಅಥವಾ ತತ್ಸಮಾನ ವಿದ್ಯಾರ್ಹತೆಗೆ ಸಮಾನ ಎಂದು ಪರಿಗಣಿಸಲಾಗಿದೆ.

ಆದರೆ ಎಂ ಸಿ ಐ ಇಲ್ಲಿ ತನ್ನ ದರ್ಪವನ್ನು ನಿರ್ಲಜ್ಜೆಯಿಂದ ಪ್ರದರ್ಶಿಸುತ್ತದೆ! ಡಿ ಎನ್ ಬಿ ಪದವಿ ಎಂ ಡಿ ಪದವಿಗೆ ಸಮಾನವಲ್ಲ ಎಂದು ಘೋಷಿಸುತ್ತದೆ! ಡಿ ಎನ್ ಬಿ ಪದವಿ ಹೊಂದಿರುವ ವೈದ್ಯರು ವೈದ್ಯಕೀಯ ಕಾಲೇಜುಗಳಲ್ಲಿ ಬೋಧಿಸುವಂತಿಲ್ಲ ಎಂದು ತಾಕೀತು ಮಾಡುತ್ತದೆ. ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡುವಾಗ ಡಿ ಎನ್ ಬಿ ವಿದ್ಯಾರ್ಹತೆಯ ಬೋಧಕರ ವಿಷಯವಾಗಿ ಎಂ ಸಿ ಐ ಅಡ್ಡಗಾಲು ಹಾಕಿ ತೊಂದರೆ ಮಾಡುತ್ತದೆ. ಇದರಿಂದ ಡಿ ಎನ್ ಬಿ ಪದವಿ ಪಡೆದವರಿಗೆ ವೈದ್ಯಕೀಯ ಕಾಲೇಜುಗಳ ಬೋಧಕರ ಹುದ್ದೆ ದೊರಕದೇ ಹೋಗಿದೆ. ಈ ವಿಷಯವಾಗಿ ನ್ಯಾಯಾಲಯಗಳು ಫರ್ಮಾನು ಹೊರಡಿಸಿದರೂ, ಸರ್ಕಾರ ಹಲವಾರು ಬಾರಿ ಸ್ಪಷ್ಟನೆ ನೀಡಿದರೂ ಎಂ ಸಿ ಐ ನ ದರ್ಪಕ್ಕೆ ಕಡಿವಾಣ ಬಿದ್ದಿಲ್ಲ. ಏನಕೇನ ಪ್ರಕಾರೇಣ ಈ ವಿಷಯದಲ್ಲಿ ಎಂ ಸಿ ಐ ತೊಂದರೆ ನೀಡಿ ಪ್ರತಿಷ್ಠೆ ಮೆರೆಯುತ್ತದೆ.

ಇಲ್ಲಿನ ಅತೀ ದೊಡ್ಡ ತೊಂದರೆ ಎಂದರೆ ನಮ್ಮ ಸರ್ಕಾರದ ಅಸ್ಪಷ್ಟ ನೀತಿ. ಒಂದು ವ್ಯವಸ್ಥಿತ ಪರಿಭಾಷೆಯೇ ಇಲ್ಲದ ಉನ್ನತ ವೈದ್ಯಕೀಯ ವ್ಯಾಸಂಗ ರಚನೆ ನಮ್ಮ ದೇಶದಲ್ಲಿದೆ! ಇಲ್ಲಿ ಪದವಿ ಮತ್ತು ತರಬೇತಿಯ ಮಧ್ಯದ ಗೆರೆಯೇ ಅದೃಶ್ಯ. ಇಂತಹ ಪದವಿ ಹೊಂದಿರುವವರು ಇಂತಿಂಥ ಕೆಲಸಗಳನ್ನು ಮಾಡಬಹುದು ಎಂಬ ಸ್ಪಷ್ಟತೆ ಇಲ್ಲವೇ ಇಲ್ಲ. ಪದವಿ ನೀಡುವಾಗ “ಇಂತಹ ಕೆಲಸ ಮಾಡಬಹುದು; ಇಂತಹ ಕೆಲಸ ಮಾಡಬಾರದು” ಎಂದು ನಿಚ್ಚಳವಾಗಿ ಉಲ್ಲೇಖಿಸುವುದಕ್ಕೆ ಅದೇನು ತೊಂದರೆಯೂ ತಿಳಿಯದು. ಸರ್ಕಾರ ಅತ್ತಿರಲಿ; ಖುದ್ದು ಎಂ ಸಿ ಐ ಕೂಡ ಇದನ್ನು ಹೇಳುವುದಿಲ್ಲ! ಕ್ಲಿಷ್ಟಕರ ಸನ್ನಿವೇಶದಲ್ಲಿ ಸಿಲುಕಿಕೊಂಡಿರುವ ವೈದ್ಯನಿಗೆ ತಾನು ಯಾವ ಮಟ್ಟದವರೆಗೆ ಚಿಕಿತ್ಸೆ ಮಾಡಬಹುದು ಎಂಬುದರ ಜಿಜ್ಞಾಸೆ ಬಂದರೆ ದೇಶದ ಆರೋಗ್ಯದ ಸ್ಥಿತಿ ಹೇಗಿರಲು ಸಾಧ್ಯ? ಚಿಕಿತ್ಸೆ ಮಾಡಿದರೂ ತಪ್ಪು; ಮಾಡದೆ ಹೋದರೂ ತಪ್ಪು ಎನ್ನುವಂತಹ ವಾತಾವರಣ ನಿರ್ಮಾಣವಾದರೆ ಯಾರನ್ನು ಹೊಣೆ ಮಾಡಬೇಕು?

ಎರಡು ವರ್ಷ ಕಾಲ ವ್ಯಾಸಂಗ ಮಾಡಿ ಒಂದು ಡಿಪ್ಲೊಮಾ ಸಂಪಾದಿಸಿದ ವೈದ್ಯನೊಬ್ಬ ಮಾಡಿದ ಸ್ಕ್ಯಾನಿಂಗ್ ಕೆಲಸವನ್ನು ಕೇವಲ ಎಂ ಸಿ ಐ ಮುದ್ರೆ ಇಲ್ಲ ಎಂಬ ಕಾರಣಕ್ಕೆ ಲಕ್ಷಗಟ್ಟಲೆ ದಂಡ ಹಾಕುವ ಮಂಡಳಿ ಒಂದೆಡೆಯಾದರೆ, ಆಧುನಿಕ ವೈದ್ಯ ಪದ್ದತಿಯ ತಲೆ ಬುಡ ಗೊತ್ತಿಲ್ಲದ ಆಯುಶ್ ಪದ್ದತಿಯ ವೈದ್ಯರಿಗೆ ಕೇವಲ ಮೂರು ತಿಂಗಳ ಸೇತುಬಂಧ ಕೋರ್ಸ್ ಮಾಡಿಸಿ ಎಲ್ಲಾ ರೀತಿಯ ಚಿಕಿತ್ಸೆಗಳನ್ನೂ ಅವರಿಂದ ಮಾಡಿಸಲು ಸನ್ನದ್ಧವಾಗಿರುವ ಸರ್ಕಾರ ಮತ್ತೊಂದೆಡೆ! ಅಂದರೆ, ವರ್ಷಗಳ ಕಾಲ ಹೆಚ್ಚಿನ ತರಬೇತಿ ಪಡೆದ ಎಂ ಬಿ ಬಿ ಎಸ್ ವೈದ್ಯ ಒಂದು ಸ್ಕ್ಯಾನಿಂಗ್ ಅನ್ನೂ ಮಾಡಬಾರದು; ಆದರೆ ಬೇರೆ ಯಾವುದೋ ಪದ್ದತಿಯಲ್ಲಿ ಡಿಗ್ರಿ ಪಡೆದಿರುವ ಯಾರು ಬೇಕಾದರೂ ಕೇವಲ ಮೂರು ತಿಂಗಳು ತರಬೇತಿ ಪಡೆದು ಎಂತಹ ಔಷಧ ಬೇಕಾದರೂ ಬರೆದು ಚಿಕಿತ್ಸೆ ನೀಡಬಹುದು! ಇಂತಹ ವಿರೋಧಾಭಾಸಗಳ ಗೂಡು ನಮ್ಮ ವ್ಯವಸ್ಥೆ. ಯಾರಿಗೋ ಬೆಣ್ಣೆ; ಯಾರಿಗೋ ಲಾತ!

ಪಶ್ಚಿಮ ಬಂಗಾಳ ವೈದ್ಯಕೀಯ ನಿಯಂತ್ರಣ ಮಂಡಳಿಯ ಈ ಆಜ್ಞೆ ಸರಿಯೇ ತಪ್ಪೇ ಎಂಬ ವಾದ ಅರ್ಥಹೀನ. ಇಲ್ಲಿ ಸರಿ-ತಪ್ಪುಗಳ ಪರಿಭಾಷೆಯೇ ಸ್ಪಷ್ಟವಿಲ್ಲ. ಸರ್ಕಾರ ತ್ವರಿತವಾಗಿ ಮಾಡಬೇಕಾದ ಕೆಲವು ಕೆಲಸಗಳಿವೆ. ಈ ಪರಿಹಾರಗಳನ್ನು ಶೀಘ್ರ ತಾರದ ಹೊರತು ಇಂತಹ ಪ್ರಸಂಗಗಳು ವೈದ್ಯರ ಧೃತಿಗೆಡಿಸುತ್ತಲೇ ಇರುತ್ತವೆ.

1.       ವೈದ್ಯಕೀಯ ವ್ಯಾಸಂಗಕ್ಕೆ ಸಂಬಂಧಿಸಿದ ಪ್ರತಿಯೊಂದು ವಿದ್ಯಾರ್ಹತೆಗೂ ಇಂತಹ ವೈದ್ಯರು ಯಾವ ಕೆಲಸ ಮಾಡಬಹುದು ಎಂಬ ಪಟ್ಟಿಯನ್ನು ಸರ್ಕಾರ ನೀಡಬೇಕು. ಅಂತಹ ಪಟ್ಟಿ ನ್ಯಾಯಾಲಯದಲ್ಲಿ ಮಾನ್ಯತೆ ಪಡೆಯಬೇಕು.
2.       ಯಾವುದೇ ವಿಶ್ವವಿದ್ಯಾಲಯವೂ ಒಂದು ವೈದ್ಯಕೀಯ ವಿದ್ಯಾರ್ಹತೆಯನ್ನು ನೀಡುವ ತರಬೇತಿ ಕೋರ್ಸ್ ಅನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸರ್ಕಾರದ ಮಾನ್ಯತೆ ಪಡೆದುಕೊಳ್ಳಬೇಕು. ಆ ಸಂದರ್ಭದಲ್ಲೇ ತೇರ್ಗಡೆ ಹೊಂದಿದ ನಂತರ ವಿದ್ಯಾರ್ಹತೆ ಪಡೆದ ವೈದ್ಯರು ಯಾವ ಯಾವ ಕೆಲಸಗಳನ್ನು ಮಾಡಲು ಅರ್ಹತೆ ಪಡೆದಿರುತ್ತಾರೆ ಎಂಬುದನ್ನು ನಮೂದಿಸಬೇಕು. ಈ ನಮೂದಿಗೆ ನ್ಯಾಯಾಲಯದ ಮಾನ್ಯತೆಯೂ ಸಿಗಬೇಕು.
3.       ಈಗ ಸದ್ಯಕ್ಕೆ ಪ್ರಚಲಿತವಿರುವ ಪ್ರತಿಯೊಂದು ವೈದ್ಯಕೀಯ ವಿದ್ಯಾರ್ಹತೆಗೂ (ಡಿಪ್ಲೋಮಾಗಳನ್ನೂ ಸೇರಿಸಿ) ಇದೇ ರೀತಿಯ ಸ್ಪಷ್ಟನೆ ಹೊರಡಿಸಬೇಕು. ಅದು ಆ ತಾರೀಖಿನಿಂದ ಮೊದಲುಗೊಂಡು ನ್ಯಾಯಾಲಯದ ಸಮ್ಮತಿ ಪಡೆಯಬೇಕು.
4.       ಈ ರೀತಿಯ ಸಮ್ಮತಿ ಇಲ್ಲದ ಕೋರ್ಸ್ ಗಳನ್ನು ರದ್ದುಪಡಿಸಬೇಕು. ತರಬೇತಿಯ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.

ಇವೆಲ್ಲಾ ಮಾಡಲು ಆಗದಂತಹ ಕೆಲಸಗಳೇನೂ ಅಲ್ಲ. ಸರ್ಕಾರ ಮನಸ್ಸು ಮಾಡಿದರೆ ಇನ್ನು ಮೂರು ತಿಂಗಳಲ್ಲಿ ಇದರ ಬಗ್ಗೆ ಸಂಪೂರ್ಣ ಸ್ಪಷ್ಟತೆ ಸಾಧ್ಯ. ಆಗ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಆಸ್ಪತ್ರೆಗಳಿಗೂ ಅನುಕೂಲ; ಕೆಲಸ ಮಾಡುವ ವೈದ್ಯರಿಗೂ ನಿರಾಳ; ನ್ಯಾಯಾಲಯಗಳ, ನ್ಯಾಯಮಂಡಲಿಗಳ ಹೊರೆಯೂ ಕಡಿಮೆ. ಒಟ್ಟಿನಲ್ಲಿ ಇಂತಹ ಸ್ಪಷ್ಟತೆಗಳಿಂದ ದೇಶದ ಸಮಗ್ರ ವೈದ್ಯಕೀಯ ನಿರ್ವಹಣೆ ಸುಲಭವಾಗುತ್ತದೆ. ಚಿಕಿತ್ಸೆಯ ವಿಷಯದಲ್ಲಿ ಶಿಸ್ತು ಮೂಡುತ್ತದೆ. ಪ್ರಾಯಶಃ ಬಹಳ ದೇಶಗಳಿಗೆ ಇದು ಮಾದರಿಯೂ ಆಗಬಹುದು.

ನಮ್ಮ ವ್ಯವಸ್ಥೆ ಇದನ್ನು ಕೇಳಿಸಿಕೊಳ್ಳಬೇಕು. ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ ವ್ಯವಸ್ಥೆಯ ಒಂದು ಭಾಗ ಇನ್ನೊಂದರೊಂದಿಗೆ ಹೊಡೆದಾಡುತ್ತಾ ಎಲ್ಲವನ್ನೂ ಅಯೋಮಯ ಮಾಡುತ್ತಿದೆ. ನಮ್ಮ ಶರೀರದಲ್ಲಿ ಎಲ್ಲಾ ಅಂಗಾಂಗಗಳೂ ಹೊಂದಿಕೊಂಡು ಕೆಲಸ ಮಾಡಿದರೆ ಮಾತ್ರ ಆರೋಗ್ಯ. ಅದು ಬಿಟ್ಟು ನಮ್ಮ ಸ್ವಂತ ಕೈಗಳು ನಮ್ಮ ಕಾಲುಗಳನ್ನು ಕತ್ತರಿಸಿದರೆ ನಮ್ಮ ಶರೀರಕ್ಕೇ ಘಾಸಿ! ಈಗ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಆಗುತ್ತಿರುವುದೂ ಅದೇ!